ಉಡುಪಿ: ಬಿಜೆಪಿ ಅಭ್ಯರ್ಥಿಯ ಭಾಷಾ ಜ್ಞಾನದ ಕುರಿತು ಕಾಂಗ್ರೆಸ್ ಅಭ್ಯರ್ಥಿ ಮಾತನಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದ ತಪ್ಪಾದ ಹೇಳಿಕೆಯನ್ನೇ ಸತ್ಯವೆಂದು ತಮಟೆ ಬಾರಿಸುವಂತಹ ರೀತಿಯಲ್ಲಿ ಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರು ಮೊದಲು ತಮ್ಮ ಕಿವಿಯನ್ನು ಸರಿಯಾಗಿಸಿಕೊಂಡು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡುವ ಕೆಲಸ ಮಾಡಲಿ ಅದನ್ನು ಬಿಟ್ಟು ಬಾಯಿ ಚಪಲಕ್ಕಾಗಿ ಸಜ್ಜನ ರಾಜಕಾರಣಿಯೋರ್ವರ ತೇಜೊವಧೆ ಮಾಡುವುದನ್ನು ನಿಲ್ಲಿಸಲಿ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೊ ಹೇಳಿದ್ದಾರೆ.
ಬ್ರಹ್ಮಾವರದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆಯವರು ಮಾತನಾಡುವಾಗ ಲೋಕಸಭೆಯಲ್ಲಿ ಭಾಷಾಂತರಕಾರರು ಇರುವುದರಿಂದ ಕನ್ನಡದಲ್ಲಿಯೂ ಮಾತನಾಡಬಹುದು. ನಾನು ಕೂಡ ಪ್ರತಿಜ್ಞಾವಿಧಿಯನ್ನು ಕನ್ನಡದಲ್ಲೇ ತೆಗೆದುಕೊಂಡಿದ್ದೆ ಆದರೆ ಅಧಿಕಾರಿಗಳು ಇತರರೊಂದಿಗೆ ಕೆಲಸ ಮಾಡುವಾಗ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳ ಜ್ಞಾನ ಬೇಕಾಗುತ್ತದೆ ಎಂದಿದ್ದರು. ಇದನ್ನು ಒಬ್ಬ ಸಂಸದನಾಗಿ ಸೇವೆ ಸಲ್ಲಿಸಿದ ಅನುಭವದ ಆಧಾರದಲ್ಲಿ ಹೇಳಿದ್ದರೇ ಹೊರತು ಯಾರನ್ನೂ ಉದ್ದೇಶಿಸಿ ಹೇಳಿಲ್ಲ. ಆದರೆ ಕೆಲವೊಂದು ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗುವ ವೇಳೆ ತಿರುಚಿ ಪ್ರಕಟಿಸಲಾಗಿದ್ದು ಇದರ ನೈಜ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲೇ ಇದೆ. ಹೀಗಿದ್ದರೂ ಕೂಡ ಬಿಜೆಪಿಗರು ಕುಂಬಳಕಾಯಿ ಕಳ್ಳ ಯಾರು ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಅಗತ್ಯವೇನಿದೆ? ಜೆಪಿ ಹೆಗ್ಡೆಯವರು ಎಲ್ಲಿಯೂ ಕೂಡ ಬಿಜೆಪಿ ಅಭ್ಯರ್ಥಿಯ ಹೆಸರನ್ನಾಗಲಿ ಅಥವಾ ಅವರನ್ನು ಸೋಲಿಸಿ ಎನ್ನುವ ಪದಗಳನ್ನೇ ಬಳಸಿಲ್ಲ. ಹತಾಶರಾಗಿರುವ ಬಿಜೆಪಿಗರು ಸಜ್ಜನ ರಾಜಕಾರಣಿಯನ್ನು ನೇರವಾಗಿ ಎದುರಿಸಲು ಸಾಧ್ಯವಾಗದೇ ವಾಮಮಾರ್ಗವನ್ನು ಅನುಸರಿಸಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ.
ಬಿಜೆಪಿಯ ಅಭ್ಯರ್ಥಿ ತಾನು ಈ ಮೊದಲು ಸಚಿವರಾಗಿದ್ದ ವೇಳೆ ನೀಡಿದ ಭರವಸೆಯನ್ನು ಈಡೇರಿಸದೆ ಜನರಿಗೆ ಮೋಸ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸಮಾಜಕಲ್ಯಾಣ ಸಚಿವರಾಗಿದ್ದ ವೇಳೆ ಕರಾವಳಿಗರಿಗೆ ಕುಚ್ಚಲಕ್ಕಿ ನೀಡುವುದಾಗಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮನೆ ಕಟ್ಟಲು ರೂ 5 ಲಕ್ಷ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಈ ವರೆಗೆ ಅವರ ಭರವಸೆಗಳು ಕೇವಲ ಘೋಷಣೆಯಾಗಿಯೇ ಉಳಿದಿದ್ದು ಯಾವುದೇ ರೀತಿಯ ಪ್ರಗತಿ ಕಂಡಿಲ್ಲ ಎನ್ನುವುದನ್ನು ಬಿಜೆಪಿಯ ವಾಟ್ಸಾಪ್ ಯುನಿವರ್ಸಿಟಿಯವರು ಗಮನಹರಿಸಬೇಕಿದೆ.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೊದಲು ಏನು ಭರವಸೆಗಳನ್ನು ನೀಡಿತ್ತೋ ಅದನ್ನು ಚಾಚೂ ತಪ್ಪದೆ ಈಡೇರಿಸಿದೆ .ಅಲ್ಲದೆ ಹಿಂದೆ ಯುಪಿಎ ಸರಕಾರ ಹಲವಾರು ಜನಪರ ಯೋಜನೆಗಳನ್ನು ದೇಶಕ್ಕೆ ನೀಡಿದ್ದು ಅದರ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಎದುರಿಸುತ್ತಿದ್ದು ಬಿಜೆಪಿಗರಿಗೆ ಹೇಳಿಕೊಳ್ಳುವಂತಹ ಯಾವುದೇ ಸಾಧನೆಗಳಿಲ್ಲದ ಕಾರಣ ವೃಥಾ ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿದ್ದಾರೆ.












