ಉಡುಪಿ: ಸೇವಾ ಹೀ ಸಂಘಟನೆ ಪರಿಕಲ್ಪನೆಯಡಿ ಸೆ.14 ರಿಂದ ಅ. 2ರ ವರೆಗೆ ಸೇವಾ ಸಪ್ತಾಹ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹಾಗೂ ಮಹಾತ್ಮಾಗಾಂಧಿ ಜಯಂತಿ ಸಂಬಂಧಿಸಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾಹಿತಿ ನೀಡಿ, ಜಿಲ್ಲೆಯ ಪ್ರತಿ ಮಂಡಲದಲ್ಲಿ 70 ಅಂಗವಿಕಲರಿಗೆ ಕೃತಕ ಅಂಗ ಜೋಡಣೆ, ಉಚಿತ ಕನ್ನಡಕ, ಬಡ ಕಾಲೋನಿಗಳಿಗೆ ತೆರಳಿ ಹಣ್ಣು ವಿತರಣೆ, ಕೋವಿಡ್ ಪೀಡಿತರಿಗೆ ಪ್ಲಾಸ್ಮಾದಾನ ಕಾರ್ಯಕ್ರಮಗಳು ನಡೆಯಲಿದೆ.
ಯುವ ಮೋರ್ಚಾ ವತಿಯಿಂದ ರಕ್ತದಾನ, ಪ್ರತಿ ಬೂತ್ನಲ್ಲಿ ವೃಕ್ಷಾರೋಪಣ ಹಾಗೂ ಪರಿಸರ ಸಂರಕ್ಷಣೆ ಸಂಕಲ್ಪ, ಹಳ್ಳಿಯಲ್ಲಿ ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್ ನಿಷೇಧ ಸಂಕಲ್ಪ, ಜಿಲ್ಲಾ ಕೇಂದ್ರದ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತಾ ಕಾರ್ಯಕ್ರಮ, ವರ್ಚುವಲ್ ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಅ. 2ರಂದು ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಸಂಕಲ್ಪ ಯಾತ್ರೆ ಕಾರ್ಯಕ್ರಮ ನಡೆಸಲಾಗುವುದು. ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ಈ ಬಾರಿ 135 ಗ್ರಾ.ಪಂ. ಗೆಲುವು ಸಾಧಿಸುವ ನಿಟ್ಟಿನಲ್ಲಿ ಎಲ್ಲ ಬೂತ್ ಮಟ್ಟದಲ್ಲಿ ತಯಾರಿ ನಡೆಸಲಾಗುತ್ತಿದೆ ಎಂದು ಕುಯಿಲಾಡಿ ಹೇಳಿದರು.
ಬಿಜೆಪಿ ಮಂಗಳೂರು ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಮುಖಂಡರಾದ ಸದಾನಂದ ಉಪ್ಪಿನಕುದ್ರು, ಉದಯ ಕುಮಾರ್ ಶೆಟ್ಟಿ, ಶ್ರೀನಿಧಿ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ಇದ್ದರು.