ಉಡುಪಿ: ಮನಮೋಹನ್ ಸಿಂಗ್ ಸರಕಾರ ಏನು ಮಾಡಿದೆ ಎನ್ನುವ ಶೋಭಾ ಕರಂದ್ಲಾಜೆ ಅವರು ಕಳೆದ ಐದು ವರ್ಷದಲ್ಲಿ ಮೋದಿ ಮಾಡಿದ ಸಾಧನೆ ಏನೆಂದು ತಿಳಿಸಬೇಕು. ಆಧಾರ್, ಐಎಫ್ಡಿ ಹೂಡಿಕೆ, ನಿರ್ಮಲ್ ಭಾರತ್(ಸ್ವಚ್ಚ ಭಾರತ), ಜಿ.ಎಸ್.ಟಿ. ಯಂತಹ ಯುಪಿಎ ಸರಕಾರದ ಯೋಜನೆಗಳನ್ನು ಅಂದು ವಿರೋಧಿಸಿ ಇಂದು ಕಾರ್ಯಗತಗೊಳಿಸಿದೆ. ಬಿಜೆಪಿಯ ಈ ನಿರ್ಧಾರದಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳಲು ಬಿಜೆಪಿ ಕಾರಣಕರ್ತವಾಗಿದೆ. ಇದನ್ನು ಬಿಜೆಪಿ ಸಾಧನೆ ಎನ್ನಬೇಕೇ? ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಈ ಬಾರಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅನೇಕ ಪ್ರಗತಿಪರ ಭರವಸೆಗಳನ್ನು ನೀಡಿದೆ. ಬಡತನ ನಿರ್ಮೂಲನಕ್ಕಾಗಿ ಬಡವರಿಗೆ ವಾರ್ಷಿಕ 72,000 ಕನಿಷ್ಠ ಆದಾಯ ಖಾತ್ರಿ ಯೋಜನೆ. ಉದ್ಯೋಗ ಸೃಷ್ಟಿಗಾಗಿ ಔದ್ಯೋಗಿಕ ಕ್ರಾಂತಿ, ಕೃಷಿ ಮತ್ತು ಕೃಷಿ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳು ಸಾರ್ವತ್ರಿಕ ಆರೋಗ್ಯಸೇವೆ, ಜನತೆಗೆ ಹೊರೆಯಾಗುತ್ತಿರುವ ಜಿ.ಎಸ್.ಟಿ.ಯನ್ನು ಏಕರೂಪ ತೆರಿಗೆಯಾಗಿ ಸರಳೀಕರಣ, ಪ್ರತೀ ಮಗುವಿಗೂ ಗುಣಮಟ್ಟದ ಶಿಕ್ಷಣ, ಮಹಿಳೆಯರಿಗೆ ಶೇ. 33 ಮೀಸಲು, ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆ ಸೇರಿದಂತೆ ಅನೇಕ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ನೋಟು ರದ್ದತಿ ಮೂಲಕ ಮೋದಿ ಸರಕಾರ ಬಡವರನ್ನು ಶೋಷಿಸುವ, ಹಿಂಸಿಸುವ ಕೆಲಸ ಮಾಡಿದೆ. ಜಿ.ಎಸ್.ಟಿ. ಕಾರ್ಯಗತಗೊಳಿಸಿ ಐದು ರೀತಿಯ ವಿವಿಧ ತೆರಿಗೆಗಳನ್ನು ವಿಧಿಸಲಾಯಿತು. ಒಂದೆಡೆ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗುತ್ತಿದೆ ಮತ್ತೊಂದೆಡೆ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿಸುತ್ತಿದೆ. ಬಡವರು ಹಾಗೂ ದುಡಿಯುವ ವರ್ಗದ ಪರವಾಗಿ ಮೋದಿ ಸರಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಅವರ ಎಲ್ಲಾ ಯೋಜನೆಗಳು ಶ್ರೀಮಂತರು, ಉದ್ಯಮಿಗಳ ಕೇಂದ್ರೀಕೃತವಾಗಿದ್ದವು. ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಭಯೋತ್ಪಾಧನೆ ಹೆಚ್ಚಳದೊಂದಿಗೆ ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ. ರಾಜ್ಯಗಳು ಹಾಗೂ ಸರಕಾರದ ನಡುವಿನ ಸಂಬಂಧ ಶಿಥಿಲವಾಗಿದೆ.
ಸೋಲಿನ ಭೀತಿಯಲ್ಲಿರುವ ಬಿಜೆಪಿ ಭಾವನಾನ್ಮಕ ವಿಷಯಗಳನ್ನು ಮುನ್ನಲೆಗೆ ತಂದು ಮತ ಯಾಚಿಸುತ್ತಿದೆ. ದೇಶದ ಅಭಿವೃದ್ಧಿಗೆ ಮತ ನೀಡಿ ಎಂದು ಕೇಳುವ ಬದಲು ರಾಮ ಮಂದಿರ ಹಾಗೂ ಹುತಾತ್ಮರ ಹೆಸರಲ್ಲಿ ಹಾಗೂ ಧರ್ಮದ ಹೆಸರಲ್ಲಿ ಮತ ಯಾಚಿಸುತ್ತಿದೆ. ದಿನ ಬೆಳಗಾದರೆ ಕರ್ನಾಟಕದ ಮೈತ್ರಿ ಸರಕಾರ ಪತನವಾಗುತ್ತಿದೆ ಎಂದು ಜನತೆಯ ಹಾದಿ ತಪ್ಪಿಸುವ ಷಡ್ಯಂತ್ರವನ್ನು ರೂಪಿಸುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸುವ ಮೂಲಕ ಮಗದೊಮ್ಮೆ ಪ್ರಧಾನಿಯಾಗುವ ಮೋದಿಯ ಕನಸು ಭಗ್ನವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.