ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ

ಬೆಂಗಳೂರು: ಕಳೆದ ಜೂನ್ ತಿಂಗಳಲ್ಲಿ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅಶೋಕ್​ ಗಸ್ತಿ (55) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಸ್ಪಷ್ಟಪಡಿಸಿದೆ.

ಈ ಮೊದಲು ಮಾಧ್ಯಮಗಳಲ್ಲಿ ಗಸ್ತಿ ಅವರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ವರದಿ ಆಗಿತ್ತು. ಹಾಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಣಿಪಾಲ್ ಆಸ್ಪತ್ರೆ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಅಶೋಕ್ ಗಸ್ತಿ ಅವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.

ಸೆಪ್ಟೆಂಬರ್ 2ರಂದು ಗಸ್ತಿ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ ನಗರದ ಮಣಿಪಾಲ್​ ಆಸ್ಪತ್ರೆಗೆ ದಾಖಲಾಗಿದ್ದರು.

ಬಳ್ಳಾರಿ ಜಿಲ್ಲೆಯ ಗಸ್ತಿ ಅವರು, ಬಿಜೆಪಿಯ ಶಿಸ್ತಿನ ಕಾರ್ಯಕರ್ತರಾಗಿದ್ದರು. ಅತ್ಯಂತ ಹಿಂದುಳಿದ ಸವಿತಾ ಸಮಾಜದವರಾಗಿದ್ದ ಗಸ್ತಿಯವರ ಪಕ್ಷ ನಿಷ್ಠೆಯನ್ನು ಪರಿಗಣಿಸಿ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು.