ಉಡುಪಿ: ಮುಂಬರಲಿರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳನ್ನು ಪುನರಪಿ ಗೆಲ್ಲುವ ಗುರಿಯೊಂದಿಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ವೇಗ ನೀಡಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಜಿಲ್ಲಾ ಪ್ರಕೋಷ್ಠಗಳ ಸಂಕುಲಗಳ ಮತ್ತು ವಿವಿಧ ಕಾರ್ಯಕ್ರಮಗಳ ಉಸ್ತುವಾರಿಗಳ ಯಾದಿಯನ್ನು ಬಿಡುಗಡೆಗೊಳಿಸಿ, ಮಾತನಾಡಿದರು.
ಇತ್ತೀಚೆಗೆ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯಾದ್ಯಂತ ಸದೃಢ ಪಕ್ಷ ಸಂಘಟನೆಗೆ ವಿವಿಧ ಕಾರ್ಯಸೂಚಿಗಳನ್ನು ನೀಡಲಾಗಿದೆ. ಮೇ 10ರಂದು ಉಡುಪಿಯಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದೆ. ಮೇ 13ರಂದು ಜಿಲ್ಲಾ ಪ್ರಕೋಷ್ಠಗಳ ಸಮಾವೇಶವು 1,000ಕ್ಕೂ ಮಿಕ್ಕಿ ಪದಾಧಿಕಾರಿಗಳು, ವೃತ್ತಿ ಪರರು ಮತ್ತು ಕಾರ್ಯಕರ್ತರ ಸಮಾಗಮದೊಂದಿಗೆ ನಡೆಯಲಿದೆ.
ಜಿಲ್ಲೆಯಾದ್ಯಂತ ಎಲ್ಲಾ ಮಂಡಲಗಳ ವ್ಯಾಪ್ತಿಯ ಪ್ರತೀ ಮಹಾ ಶಕ್ತಿಕೇಂದ್ರಗಳಲ್ಲಿ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸಲಾಗುವುದು. ಮೇ 30ರಂದು ಮೋದಿ ಸರಕಾರದ 3ನೇ ಯಶಸ್ವೀ ವರ್ಷಾಚರಣೆ ಅದ್ದೂರಿಯಾಗಿ ನಡೆಯಲಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರದ ವಿವಿಧ ಜನಪರ ಯೋಜನೆಗಳ ಪ್ರಚಾರದ ದೃಷ್ಠಿಯಿಂದ ಎ.7ರಿಂದ 20ರ ವರೆಗೆ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಪಕ್ಷದ ಪ್ರತೀ ಸಭೆಗಳ ಪ್ರಾರಂಭದಲ್ಲಿ ಓರ್ವ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರರ ಪರಿಚಯವನ್ನು ಮಾಡುವ ಪದ್ಧತಿಯನ್ನು ಬೆಳೆಸುವುದು, ಬೂತ್ ಅಧ್ಯಕ್ಷರ ನಾಮ ಫಲಕ ಅನಾವರಣ, ವಿಸ್ತಾರಕ ಯೋಜನೆಯ ವರದಿ, ಕೀ ವೋಟರ್ಸ್, ಮೈಕ್ರೋ ಡೊನೇಷನ್, ಮಂಡಲ ಮತ್ತು ಮೋರ್ಚಾಗಳ ಕಾರ್ಯಕಾರಿಣಿ ಸಭೆಗಳು ಮುಂತಾದ ಪಕ್ಷ ಸಂಘಟನೆಯ ಪೂರಕ ಕೆಲಸ ಕಾರ್ಯಗಳನ್ನು ಬದ್ಧತೆಯಿಂದ ನಿಗದಿತ ಕಾಲ ಮಿತಿಯೊಳಗೆ ಪೂರ್ಣಗೊಳಿಸುವ ಜೊತೆಗೆ ಚುನಾವಣೆಗೆ ಸಜ್ಜಾಗುವಂತೆ ಸದೃಢ ಪಕ್ಷ ಸಂಘಟನೆಗೆ ವೇಗ ನೀಡಬೇಕು ಎಂದು ಕುಯಿಲಾಡಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಸಂಘಟನಾತ್ಮಕವಾಗಿ ಉಡುಪಿ ಜಿಲ್ಲೆಗೆ ರಾಜ್ಯದಲ್ಲಿ ವಿಶೇಷ ಸ್ಥಾನಮಾನವಿದೆ. ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಅವಿರತ ಶ್ರಮದಿಂದ ಮಂಗಳೂರು ವಿಭಾಗವೂ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ.
ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರು ಹಾಗೂ ಸಂಕುಲಗಳ ಉಸ್ತುವಾರಿಗಳು ಎಲ್ಲಾ ಪ್ರಕೋಷ್ಠ ಸಮಿತಿಗಳನ್ನು ಸಕ್ರಿಯಗೊಳಿಸಿ, ಸಭೆಗಳನ್ನು ನಡೆಸಿ, ಸಂಘಟಿತ ಪ್ರಯತ್ನದ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಬೇಕು. ವಿವಿಧ ಕಾರ್ಯಕ್ರಮಗಳ ಮೂಲಕ ಪಕ್ಷ ನೀಡಿರುವ ಅವಕಾಶವನ್ನು ಸದುಪಯೋಗಗೊಳಿಸುವ ಜೊತೆಗೆ ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡಿ ಮುಂಬರಲಿರುವ ಚುನಾವಣೆಗಳಲ್ಲಿ ಮಗದೊಮ್ಮೆ ಬಿಜೆಪಿ ವಿಜಯಯಾತ್ರೆಗೆ ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಸಜ್ಜಾಗಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪಕ್ಷದ ಸಂಘಟನಾತ್ಮಕ ವಿಚಾರ ಮತ್ತು ವಿವಿಧ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಮತ್ತು ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ ವಂದಿಸಿದರು.