ನವದೆಹಲಿ: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ (ಜೆ.ಪಿ.ನಡ್ಡಾ) ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಪಕ್ಷದ ಸಂಘಟನೆ ವಿಚಾರದಲ್ಲಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಅತ್ಯಂತ ನಂಬಿಕಸ್ಥ ನಾಯಕನಿಗೆ ಬಿಜೆಪಿ ಪಟ್ಟ ಒಲಿದಂತಾಗಿದೆ.
ಬಿಜೆಪಿಯ ಕಾರ್ಯಾಧ್ಯಕ್ಷರಾಗಿದ್ದ ಜೆ.ಪಿ.ನಡ್ಡಾ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಬಿಜೆಪಿ ಚುನಾವಣೆ ಸಮಿತಿಯ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಘೋಷಣೆ ಮಾಡಿದ್ದಾರೆ.
ದೆಹಲಿಯ ಬಿಜೆಪಿ ಮುಖ್ಯಕಚೇರಿಯಲ್ಲಿ ಪಕ್ಷದ ಹಿರಿಯ ನಾಯಕರು, ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸಚಿವರ ಸಮ್ಮುಖದಲ್ಲಿ ಜೆ.ಪಿ. ನಡ್ಡಾ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಕಳೆದ ವರ್ಷದ ಜುಲೈನಲ್ಲಿ ನಡ್ಡಾ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಎಬಿವಿಪಿಯಿಂದ ಬೆಳೆದವರು:
ಜೆ.ಪಿ. ನಡ್ಡಾ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನಿಂದ ಬೆಳೆದು ಬಂದವರು. ಅವರ ರಾಜಕೀಯ ಬೇರುಗಳಿರುವುದು ರಾಷ್ಟ್ರೀಯ ಆರ್ಎಸ್ಎಸ್ನಲ್ಲೇ. ಉತ್ತರ ಪ್ರದೇಶದಲ್ಲಿ ರಚನೆಯಾಗಿದ್ದ ಮಹಾಘಟಬಂಧನವನ್ನೇ ದೂಳಿಪಟ ಮಾಡಿದ ಅವರ ಸಂಘಟನೆ ಚಾತುರ್ಯ ಇಂದು ಅವರನ್ನು ಬಿಜೆಪಿಯ ಅತ್ಯುನ್ನತ ಸ್ಥಾನಕ್ಕೆರಿಸುತ್ತಿದೆ.