ಉಡುಪಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಚುನಾವಣಾ ಪ್ರವಾಸ ನಿಮಿತ್ತ ಉಡುಪಿಗೆ ಆಗಮಿಸಿದ ಸಂದರ್ಭ ಶ್ರೀಕೃಷ್ಣ ದೇವರ ದರ್ಶನ ಪಡೆದು ಬಳಿಕ ಪೇಜಾವರ ಮಠದ ಸಭಾಂಗಣದಲ್ಲಿ “ಸಂತ ಮಂಥನ” ಎನ್ನುವ ಕಾರ್ಯಕ್ರಮದಲ್ಲಿ ಕರಾವಳಿ ಭಾಗದ ಅನೇಕ ಮಠಾಧೀಶರೊಂದಿಗೆ ಸಮಾಲೋಚನೆಯನ್ನು ನಡೆಸಿದರು. ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಅನೇಕ ಮಠಾಧೀಶರು ಭಾಗವಹಿಸಿದ್ದರು.
ಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣುಮೂರ್ತಿ ಆಚಾರ್ಯ,ಕೃಷ್ಣ ಭಟ್,ಇಂದುಶೇಖರ ಹೆಗಡೆ ಮೊದಲಾದವರು ನಡ್ಡಾರವರನ್ನು ಗೌರವದಿಂದ ಬರಮಾಡಿಕೊಂಡರು. ಶ್ರೀವಿಶ್ವೇಶತೀರ್ಥರ ಪಾದುಕೆಗೆ ಪುಷ್ಪ ನಮನವನ್ನುಅರ್ಪಿಸಿದ ಬಳಿಕ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥರಿಂದ ಶ್ರೀರಾಮವಿಠ್ಠಲ ದೇವರ ತುಳಸಿ,ಗಂಧ,ಪುಷ್ಪವನ್ನು ಸ್ವೀಕರಿಸಿದರು. ಬಳಿಕ ಸಭೆಗೆ ಆಗಮಿಸಿ ಎಲ್ಲ ಮಠಾಧೀಶರೊಂದಿಗೆ ದೀಪವನ್ನು ಬೆಳಗಿಸಿ ಸಭೆಯಲ್ಲಿ ಭಾಗವಹಿಸಿದರು.
ಉಡುಪಿ ಶ್ರೀಕೃಷ್ಣ,ಅಷ್ಟಮಠಾಧೀಶರ ಮತ್ತು ಪೌರಾಣಿಕೆಯ ಹಿನ್ನೆಲೆಯಲ್ಲಿ ಪರಿಚಯಾತ್ಮಕ ಪ್ರಸ್ತಾವನೆಯನ್ನು ರಾಜಗೋಪಾಲಾಚಾರ್ಯ ಇವರು ನೀಡಿದರು.
ಬೈಕಾಡಿ ಸುಪ್ರಸಾದ ಶೆಟ್ಟಿ ಮಠಾಧೀಶರ ಪರಿಚಯವನ್ನು ನೀಡಿದರು.
ಕರಾವಳಿ ಭಾಗದ ನಿರೀಕ್ಷೆ ಹಾಗೂ ಅಪೇಕ್ಷೆಗಳ ಕುರಿತಾದ 10 ಅಂಶಗಳ ಪತ್ರಕವನ್ನು ಎಲ್ಲ ಮಠಾಧೀಶರ ಪರವಾಗಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ನಡ್ಡಾರಿಗೆ ಸಲ್ಲಿಸಿದರು. ಈ ಪತ್ರಕದ ಕುರಿತು ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿಯವರು,ಜೈನ ಮಠದ ಭಟ್ಟಾರಕ ಸ್ವಾಮೀಜಿಯವರು,ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು,ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ವಿಚಾರವನ್ನು ಮಂಡಿಸಿದರು. ಹಿಂದೆ ರಾಜಾಶ್ರಯದ ಕಾಲದಲ್ಲಿ ಸಾಧು ಸಂತರ, ರಾಜರ್ಷಿಗಳ, ಮುನಿಗಳ ಮಾರ್ಗದರ್ಶನವನ್ನು ಪಡೆದು ಆಡಳಿತವನ್ನು ನಡೆಸುವ ಪರಿಪಾಠವಿತ್ತು. ಪ್ರಸ್ತುತ ಭಾರತೀಯ ಜನತಾ ಪಕ್ಷವು ಎಲ್ಲರ ಅಭಿಪ್ರಾಯವನ್ನು ಪಡೆದು ಈ ಪರಂಪರೆಯನ್ನು ಇಟ್ಟುಕೊಂಡಿರುವ ಬಗ್ಗೆ ಎಲ್ಲರ ಪ್ರಶಂಸೆಯನ್ನು ಪಡೆಯಿತು.
ಜೆ.ಪಿ.ನಡ್ಡಾ ಮಾತನಾಡಿ, ಇಂತಹ ಬದ್ಧತೆಯನ್ನು ನಮ್ಮ ಪಕ್ಷವು ಹೊಂದಿದ್ದು ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಗೊಳಿಸಿ ಅದನ್ನು ಜಾರಿಗೊಳಿಸಲು ಬದ್ಧರಿದ್ದೇವೆ. ಕೆಲವೊಂದು ಅಂಶಗಳ ಉಪಕ್ರಮವನ್ನು ನಡೆಸಿದ್ದೇವೆ ಮುಂದೆ ಎಲ್ಲ ಸಂತರ ಅಭಿಪ್ರಾಯವನ್ನು ಗೌರವಿಸಿ ಪ್ರಯತ್ನಪೂರ್ವಕವಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.
ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ರಾಜ್ಯ ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕುಮಾರ್ ಕಟೀಲ್, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಎಸ್.ಅಂಗಾರ, ಸುನಿಲ್ ಕುಮಾರ್, ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಕಾಪು ಶಾಸಕ ಲಾಲಾಜಿ ಮೆಂಡನ್, ಬೈಕಾಡಿ ಸುಪ್ರಸಾದ ಶೆಟ್ಟಿ, ಕಿದಿಯೂರು ಉದಯಕುಮಾರ್ ಶೆಟ್ಟಿ, ಶ್ರೀಶ ನಾಯಕ್, ಸತೀಶ್ ಕುಮಾರ್, ಸ್ವಸ್ತಿಕ್ ಪೆರ್ಣಂಕಿಲ ಮೊದಲಾದವರು ಉಪಸ್ಥಿತರಿದ್ದರು.
ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿದರು.












