ಉಡುಪಿ: ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದಂತಹ ಮತದಾರರೆ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿದ ಗ್ಯಾರಂಟಿಯ ಬಗ್ಗೆ ಮಾತನಾಡುತ್ತಿಲ್ಲ, ಏಕೆಂದರೆ ಅವರಿಗೆ ಕಾಂಗ್ರೆಸ್ ಪಕ್ಷವು ನೀಡಿದ ಭರವಸೆ ಹಾಗೂ ಗ್ಯಾರಂಟಿಯನ್ನು ಖಂಡಿತವಾಗಿಯೂ ನೀಡುತ್ತಾರೆ ಎಂಬ ನಂಬಿಕೆ ಇದೆ. ಆದರೆ ಈ ಲಂಚಕೋರ ಹಾಗೂ ಸುಳ್ಳುಗಳ ಭರವಸೆಯನ್ನು ನೀಡಿದಂತಹ ಬಿಜೆಪಿಯವರಿಗೆ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿಯ ಬಗ್ಗೆ ಯೋಚನೆ ಯಾಗಿದೆ. ನಾವು ಈ ಗ್ಯಾರಂಟಿಯನ್ನು ಅನುಷ್ಠಾನಕ್ಕೆ ತಂದಾಗ ರಾಜ್ಯದಲ್ಲಿ ಬಿಜೆಪಿ ಕಣ್ಮರೆಯಾಗೋದು ಸಹಜ ಅದಕ್ಕಾಗಿ ಈ ಬಿಜೆಪಿ ನಾಯಕರುಗಳು ನಿದ್ದೆಯಲ್ಲಿ ಕೂಡ ನಮ್ಮ ಗ್ಯಾರಂಟಿ ಯ ಬಗ್ಗೆ ಕನವರಿಸುತ್ತಾ ಇರುತ್ತಾರೆ ಎಂದು ರಮೇಶ್ ಕಾಂಚನ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ತಾವು ಅಧಿಕಾರಕ್ಕೆ ಬರುವ ಮೊದಲು ವಿದೇಶಿ ಬ್ಯಾಂಕುಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಕಪ್ಪು ಹಣ ನಮ್ಮ ಭಾರತೀಯರಿಗೆ ಸೇರಿದ್ದು ಅದನ್ನು ಕೇವಲ 100 ದಿನದಲ್ಲಿ ವಾಪಸ್ ತಂದು ದೇಶದ ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ, ಯುವಕರಿಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ, 2022ರ ಒಳಗೆ ಪ್ರತಿ ಒಬ್ಬ ಭಾರತೀಯನಿಗೆ ಮನೆ ನಿರ್ಮಾಣ ಮಾಡುತ್ತೇನೆ ಎಂದು ಹೇಳಿ ಅಧಿಕಾರವನ್ನು ಅನುಭವಿಸುತ್ತ ಇಂದಿಗೆ 108 ತಿಂಗಳು ಕಳೆದರೂ ಒಂದು ಭರವಸೆಯನ್ನು ಕೂಡ ಯಾವುದೇ ಭಾರತೀಯನಿಗೆ ತಲುಪಿಸಲಿಲ್ಲ ಎಂಬುದು ಬಿಜೆಪಿಯ ನಾಯಕರಿಗೆ ತಿಳಿದಿರಲಿ. ಸುಳ್ಳು ಹೇಳಿ ಜನಸಾಮಾನ್ಯರನ್ನು ಲೂಟಿ ಮಾಡುವುದೇ ಬಿಜೆಪಿಯ ನಾಯಕರುಗಳ ಕಾಯಕವಾದರೆ ಕೊಟ್ಟ ಭರವಸೆ ಹಾಗೂ ಗ್ಯಾರಂಟಿಯನ್ನು ನೀಡಿ ಜನಸಾಮಾನ್ಯರನ್ನು ಉದ್ದಾರ ಮಾಡುವುದೇ ಕಾಂಗ್ರೆಸ್ ಪಕ್ಷದ ಕೆಲಸವಾಗಿದೆ. ಈ ಹಿಂದೆಯೂ ಕೂಡ ನುಡಿದಂತೆ ನಡೆದಿದ್ದೇವೆ ಮುಂದೆಯೂ ನುಡಿದಂತೆಯೇ ನಡೆಯುತ್ತೇವೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಪತ್ರಿಕಾ ಪ್ರಕಟಣೆಯ ಮೂಲಕ ಬಿಜೆಪಿಯ ನಾಯಕರಿಗೆ ತಿರುಗೇಟು ನೀಡಿದ್ದಾರೆ.