ಕಾಂಗ್ರೆಸ್ ನ ಕಾಮಾಲೆ ಕಣ್ಣಿಗೆ ಜಗವೆಲ್ಲಾ ಹಳದಿ: ಕಿದಿಯೂರು ಉದಯಕುಮಾರ್ ಶೆಟ್ಟಿ

ಉಡುಪಿ: ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರದ ಜಾಹೀರಾತುಗಳಲ್ಲಿ ಬಿಜೆಪಿ ಕರ್ನಾಟಕದ ಜನತೆಗೆ ಚೆಂಬು ನೀಡಿದೆ ಎಂದು ಪ್ರಚಾರ ಮಾಡುತ್ತಿರುವುದು, ಕಾಮಾಲೆ ಕಣ್ಣಿನವರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯಕುಮಾರ್ ಶೆಟ್ಟಿ ವ್ಯಂಗ್ಯ ಮಾಡಿದ್ದಾರೆ.

ಅವರು ಉಡುಪಿ ವಿಧಾನಸಭಾ ಕ್ಷೇತ್ರದ ದೊಡ್ಡಣಗುಡ್ಡೆಯ ಮಣೋಲಿಗುಜ್ಜಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯ ಬಂದು ನಾಲ್ಕು ತಲೆಮಾರುಗಳ ಆಡಳಿತ ನಡೆಸಿದ ಕಾಂಗ್ರೆಸ್ ಗೆ ಕನಿಷ್ಠ ಶೌಚಾಲಯ ನಿರ್ಮಾಣ ಮಾಡಲು ಸಾಧ್ಯವಾಗದೇ ಜನರ ಕೈಗೆ ಚೆಂಬು ನೀಡಿದ್ದು ಇದೇ ಕಾಂಗ್ರೆಸ್, ಬಿಜೆಪಿ ತನ್ನ ಆಡಳಿತದಲ್ಲಿ 12 ಕೋಟಿ ಕುಟುಂಬಗಳಿಗೆ ಶೌಚಾಲಯ ನೀಡಿದೆ. ದೇಶದ ಹಣವನ್ನು ಲೂಟಿ ಹೊಡೆದು ಸ್ವಿಸ್ ಬ್ಯಾಂಕ್ ನಲ್ಲಿ ಕೂಡಿಟ್ಟು, ದೇಶದ ಜನತೆಗೆ ಚೆಂಬು ನೀಡಿದ್ದು ಇದೇ ಕಾಂಗ್ರೆಸ್.

ಬೆಳೆ ಪರಿಹಾರ ಹಿಂದಿನ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಎಷ್ಟು ನೀಡಿದೆ? ಬಿಜೆಪಿ ಸರಕಾರ ಇದ್ದಾಗ ಎಷ್ಟು ನೀಡಿದೆ ಎಂಬುದನ್ನು ಅಂಕಿ ಅಂಶ ತೆಗೆದು ನೋಡಿ ಆಗ ಯಾರು ಯಾರಿಗೆ ಚೆಂಬು ನೀಡಿದ್ದು ಎಂಬುದರ ಅರಿವಾಗುತ್ತೆ. ರಾಜ್ಯದ ಕಾಂಗ್ರೆಸ್ ಸರಕಾರ ದಿವಾಳಿ ಅಂಚಿಗೆ ತಲುಪಿದ್ದು , ರಾಜ್ಯದ ಜನರಿಗೆ ಖಾಲಿ ಚೆಂಬು ನೀಡುವ ದಿನ ದೂರವಿಲ್ಲ ಎಂದು ಅವರು ಹೇಳಿದರು.

ಶಾಸಕ ಯಶಪಾಲ್ ಸುವರ್ಣ, ಪ್ರಬುದ್ಧರ‌ ಪ್ರಕೋಷ್ಠದ ‌ರಾಜ್ಯ ಸಮಿತಿ ಸದಸ್ಯ ರಾಧಕೃಷ್ಣ ಶೆಟ್ಟಿ ದೊಡ್ಡಣಗುಡ್ಡೆ, ಜಿಲ್ಲಾ ವಕ್ತಾರ ವಿಜಯ್ ಕುಮಾರ್ ಉದ್ಯಾವರ, ಪ್ರಮುಖರಾದ ಮಧುಕರ ಮುದ್ರಾಡಿ, ದಿನೇಶ್ ಅಮೀನ್, ಡಾ. ರವೀಂದ್ರ , ಸುಂದರ್ ಅಮೀನ್, ನವೀನ್ ರಾವ್, ಮುರಳೀಧರ ಕುಂದರ್ , ಸುಭಾಷಿತ್ ಕುಮಾರ್ ಮುಂತಾದವರಿದ್ದರು.

ಪ್ರಶಾಂತ್ ಭಟ್ ಪೆರಂಪಳ್ಳಿ ಸ್ವಾಗತಿಸಿ, ಶಂಕರ್ ಕುಲಾಲ್ ವಂದಿಸಿದರು.