ಸಚಿವ ಸ್ಥಾನ ಯಾಕೆ ಸಿಗಲಿಲ್ಲವೆಂದು ನನಗೆ ಗೊತ್ತಿಲ್ಲ : ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೇಸರ

ಕುಂದಾಪುರ: ಲಾಬಿ ಮಾಡಿ ಸಚಿವ ಸ್ಥಾನ ಪಡೆಯೋದು ನನಗೆ ಗೊತ್ತಿಲ್ಲ ಸಚಿವ ಸ್ಥಾನ ಯಾಕೆ ಸಿಗಲಿಲ್ಲವೆಂದು ನನಗೆ ಗೊತ್ತಿಲ್ಲ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಮಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಅವರು ಮಂಗಳವಾರ ತಮ್ಮ ಹಾಲಾಡಿಯಲ್ಲಿರುವ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಮಾಣವಚನಕ್ಕೆ ನನಗೆ ಆಹ್ವಾನ ಇರಲಿಲ್ಲ, ಲಾಬಿ ಮಾಡಿ ಸಚಿವ ಸ್ಥಾನ ಪಡೆಯೋದು ನನಗೆ ಗೊತ್ತಿಲ್ಲ. ಗುಂಪುಗಾರಿಕೆ, ವಾಮಮಾರ್ಗ ಎಂದಿಗೂ ಮಾಡಿದವನಲ್ಲ. ಜಾತಿ ರಾಜಕಾರಣ ಮಾಡಿ ನನಗೆ ಗೊತ್ತಿಲ್ಲ ಎಂದ ಹಾಲಾಡಿ, ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವಿಗೆ ಶ್ರಮಿಸಿದ್ದೇನೆ. ಬಿಜೆಪಿಗೆ ಪಕ್ಷನಿಷ್ಠೆ ತೋರಿಸಿದ್ದೇನೆ ಅಲ್ಲದೆ ಪಕ್ಷೇತರನಾಗಿದ್ದಾಗಲೂ ಬಿಜೆಪಿ ಬೆಂಬಲಿಸಿದ್ದೇನೆ. ಮಾಧ್ಯಮದವರು ನನ್ನನ್ನು ಕೇಳುವುದರ ಬದಲು ಬಿಜೆಪಿಯ ಪ್ರಮುಖರನ್ನೇ ಕೇಳಿದರೆ ಸೂಕ್ತ ಉತ್ತರ ಲಭಿಸುವುದು ಎಂದರು.

ಸಚಿವ ಸ್ಥಾನ ವಂಚಿತರು ಬೆಂಗಳೂರಿಗೆ ನನ್ನನ್ನು ಸಭೆಗೆ ಕರೆದಿದ್ದರು. ಆದರೆ ನಾನು ಎಲ್ಲೂ ಹೋಗಿಲ್ಲ, ಕ್ಷೇತ್ರದಲ್ಲೇ ಇದ್ದೇನೆ ಎಂದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಸತತ ಐದು ಬಾರಿ ಗೆದ್ದಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮುದಾಯದ ಪ್ರಭಾವಿ ನಾಯಕ ಎನಿಸಿಕೊಂಡಿದ್ದಾರೆ. ಈ ಬಾರಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹಾಲಾಡಿ ಬೆಂಬಲಿಗರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.