ಬ್ರಾಹ್ಮಣ ಸಮುದಾಯದ ನಾಯಕರನ್ನು ಸಿಎಂ ಮಾಡಲು ಬಿಜೆಪಿ ಹೈಕಮಾಂಡ್ ಒಲವು.!

ಬೆಂಗಳೂರು: ಬಿ.ಎಸ್. ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕರ್ನಾಟಕದ ಮುಂದಿನ ಸಿಎಂ ಯಾರು ಎಂಬ ಬಗ್ಗೆ ಚರ್ಚೆ ಜೋರಾಗಿದ್ದು, ಈ ಮಧ್ಯೆ ಬಿಜೆಪಿ ಹೈಕಮಾಂಡ್ ಬ್ರಾಹ್ಮಣ ಸಮಾಜದ ನಾಯಕನಿಗೆ ಸಿಎಂ ಪಟ್ಟ ಕಟ್ಟಲು ಉತ್ಸುಕವಾಗಿದೆ ಎಂದು ಯಡಿಯೂರಪ್ಪನವರ ವಿರೋಧಿ ಬಣದಲ್ಲಿ ಮಾತುಗಳು ಕೇಳಿಬರುತ್ತಿವೆ.

ಅದರಲ್ಲೂ ಕೇಂದ್ರ ಸಚಿವ, ಸಂಸದ ಪ್ರಹ್ಲಾದ್ ಜೋಶಿ ಬದಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಬಗ್ಗೆ ಹೈಕಮಾಂಡ್​ಗೆ ಹೆಚ್ಚಿನ ಒಲವಿದೆ ಎಂಬ ಮಾತುಗಳೂ ಹರಿದಾಡುತ್ತಿದೆ.
ಬ್ರಾಹ್ಮಣ ಸಮುದಾಯದವರು ಸಿಎಂ ಆಗಿ ಆಯ್ಕೆಯಾದರೆ ಎಸ್​​​​​ಟಿ ಸಮುದಾಯದವರು ಉಪ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ. ಒಂದು ವೇಳೆ ಹೀಗಾದಲ್ಲಿ ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮುಲು ಅವರಿಗೂ ಅದೃಷ್ಟ ಖುಲಾಯಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಹಳೆ‌ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಡಿಸಿಎಂ ಸೂತ್ರ ರಚಿಸುವ ಸಾಧ್ಯತೆಯಿದ್ದು, ಒಕ್ಕಲಿಗ ಸಮುದಾಯದ ಡಿಸಿಎಂ ಆಯ್ಕೆಗೆ ಬಿಜೆಪಿ ಸೂತ್ರ ರಚಿಸಿದೆ ಎಂದು ಹೇಳಲಾಗುತ್ತಿದೆ. ಸಿ.ಪಿ.ಯೋಗೇಶ್ವರ್ ಡಿಸಿಎಂ ಆಗಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ಒಂದು ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಬ್ರಾಹ್ಮಣ ಸಮುದಾಯವನ್ನು ಪರಿಗಣಿಸದೇ ಹೋದಲ್ಲಿ ಅರವಿಂದ ಬೆಲ್ಲದ್ ಸಿಎಂ ಆಗುವ ಸಾಧ್ಯತೆ ದಟ್ಟವಾಗಿದೆ. ಸಂಜೆ ದೆಹಲಿಯಿಂದ ಬಿಜೆಪಿಯ ವೀಕ್ಷಕರು ರಾಜ್ಯಕ್ಕೆ ಬರುವ ಸಾಧ್ಯತೆಯಿದ್ದು, ವೀಕ್ಷಕರು ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.

ಸಿಎಂ ಸ್ಥಾನಕ್ಕೆ ಇನ್ನೂ ಇಬ್ಬರು ನಾಯಕರು ಹೆಸರು ಸಹ ಪ್ರಬಲವಾಗಿ ಕೇಳಿಬರುತ್ತಿದೆ. ಸಂಸದ ಶಿವಕುಮಾರ ಉದಾಸಿ ಮತ್ತು ವಿಧಾನಸಭೆ ಸ್ಪೀಕರ್ ಮತ್ತು ಹಿರಿಯ ಬಿಜೆಪಿ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರುಗಳು ಸಹ ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿವೆ.

ಈ ಮಧ್ಯೆ ಮುಖ್ಯಮಂತ್ರಿಯಾಗಲು ಕಸರತ್ತು ನಡೆಸುತ್ತಿರುವ ಶಾಸಕ ಮುರುಗೇಶ್ ನಿರಾಣಿ ಅವರ ಬೀಳಗಿ ಕ್ಷೇತ್ರದ ಬಿಜೆಪಿ ಮುಖಂಡರು,ಕಾರ್ಯಕರ್ತರು ಬೆಂಗಳೂರಿನತ್ತ ಪ್ರವಾಸ ಬೆಳೆಸಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.