ಉಡುಪಿ: ದೇಶ, ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ಹಿರಿಯಡಕ ಗಾಂಧಿ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಭೂ ಸುಧಾರಣಾ ಕಾಯ್ದೆಯ’ ಸುವರ್ಣ ಮಾಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭೂ ಸುಧಾರಣಾ ಕಾಯ್ದೆಯ 79 ಎ, ಬಿ ಹಾಗೂ ಸಿ ಸೆಕ್ಷನ್ ರದ್ದು ಮಾಡುವ ಮೂಲಕ ಬಿಜೆಪಿ ಸರ್ಕಾರ ಉಳ್ಳವನನ್ನು ಭೂಮಿಯ ಒಡೆಯನ್ನನಾಗಿಸಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಹೋಟೆಲ್ ಗಳಲ್ಲಿ ಬೆಲೆ ನಿಗದಿ ಮಾಡುವಂತೆ ವರ್ಗಾವಣೆಗೆ ಬೆಲೆ ನಿಗದಿ ಮಾಡುತ್ತಿದ್ದಾರೆ. ಟೆಂಡರ್ ಕಾಮಗಾರಿಗಳಲ್ಲಿ ಸರ್ಕಾರ ಶೇ. 40 ಕಮಿಷನ್ ಪಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೆ, ‘ನ ಖಾವುಂಗಾ ನಾ ಖಾನೆ ದೊಂಗಾ ಎಂದವರು’ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ ಎಂದು ಟೀಕಿಸಿದರು.
ಮನ್ ಮೋಹನ್ ಸಿಂಗ್ ಸರ್ಕಾರ ಇದ್ದಾಗ 53 ಲಕ್ಷ ಕೋಟಿ ಇದ್ದ ದೇಶದ ಸಾಲ, ಮೋದಿ ಸರ್ಕಾರದಲ್ಲಿ 152 ಲಕ್ಷ ಕೋಟಿ ರೂ. ಗೆ ಏರಿಕೆಯಾಗಿದೆ ಎಂದು ಆರೋಪಿಸಿದರು.