ಚುನಾವಣೋತ್ತರ ಹಿಂಸಾಚಾರದ ಆರೋಪದ ಪ್ರಕರಣದಲ್ಲಿ, ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಬಜರಂಗದಳ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಾರ್ಯಕರ್ತರು ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ ಬಂಟ್ವಾಳ ತಾಲೂಕಿನ ಮಾಣಿ ಬಳಿ ನಡೆದ ದಾಳಿಯಲ್ಲಿ ಬಜರಂಗದಳ ಕಾರ್ಯಕರ್ತ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಎಂಬುವವರಿಗೆ ಗಾಯಗಳಾಗಿವೆ.
ಎರಡು ಗುಂಪುಗಳ ನಡುವಿನ ಸೇಡಿನ ಪ್ರಕ್ರಿಯೆಯಲ್ಲಿಈ ಪ್ರಕರಣ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಶಂಕಿತ ದುಷ್ಕರ್ಮಿಗಳು ಓಮ್ನಿ ಕಾರಿನಲ್ಲಿ ಬಂದು ದ್ವಿಚಕ್ರವಾಹನದಲ್ಲಿ ಬಂದ ಇಬ್ಬರ ಮೇಲೆ ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಕೇಶ್, ಮಣಿ ಮಂಜುನಾಥ್ ಅಲಿಯಾಸ್ ಮಂಜು, ಪ್ರವೀಣ್ ನಾಯ್ಕ್ ಮತ್ತು ಮಹಾಲಿಂಗ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಕ್ಷಿಣ ಕನ್ನಡ ಎಸ್ಪಿ ಡಾ.ಅಮಾತೆ ವಿಕ್ರಮ್ ಘಟನೆಯನ್ನು ದೃಢಪಡಿಸಿದ್ದಾರೆ ಮತ್ತು ದಾಳಿಯಲ್ಲಿ ಯಾವುದೇ ಹರಿತವಾದ ಆಯುಧಗಳನ್ನು ಬಳಸಲಾಗಿಲ್ಲ ಎಂದು ಹೇಳಿದ್ದಾರೆ. ದುಷ್ಕರ್ಮಿಗಳು ಕಾಂಗ್ರೆಸ್ ಪಕ್ಷದವರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಕರ್ನಾಟಕ ಚುನಾವಣಾ ಫಲಿತಾಂಶದ ದಿನದಂದು ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾಗ ಮಾತಿನ ಚಕಮಕಿ ನಡೆದಿತ್ತು.