ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆ: 17 ಸ್ಥಾನ ಬಿಜೆಪಿ ತೆಕ್ಕೆಗೆ; ಬಹುಮತದ ಕೊರತೆ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸ್ಪಷ್ಟ ಬಹುಮತದ ಕೊರತೆ ಎದುರಾಗಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಮತ ಎಣಿಕೆ ಮುಕ್ತಾಯವಾದೆ.

35 ವಾರ್ಡ್‌ಗಳಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಎಐಎಂಐಎಂ 2 ಮತ್ತು ಜೆಡಿಎಸ್ ಅಭ್ಯರ್ಥಿ 1 ವಾರ್ಡ್‌ನಲ್ಲಿ ಚುನಾಯಿತರಾಗಿದ್ದಾರೆ ಎಂದು ಘೋಷಿಸಲಾಯಿತು. ಉಳಿದ ಐದು ವಾರ್ಡ್‌ಗಳಲ್ಲಿ ಪಕ್ಷೇತರರು ಆಯ್ಕೆಯಾಗಿದ್ದಾರೆ. ಪಕ್ಷೇತರರ ಬೆಂಬಲದೊಂದಿಗೆ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಗೆಲುವಿನ ಬಗ್ಗೆ ಟ್ವೀಟ್ ಮಾಡಿ ಸಂತಸ ವ್ಯಕ್ತ ಪಡಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ, “ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 35 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ನಮ್ಮ ಪಕ್ಷ ಅಭೂತಪೂರ್ವ ಸಾಧನೆಗೈದಿದ್ದು, ವಿಜಯ ಪತಾಕೆ ಹಾರಿಸಿದ ಪ್ರತಿಯೊಬ್ಬ ಸದಸ್ಯರಿಗೂ ಹಾರ್ದಿಕ ಅಭಿನಂದನೆಗಳು. ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಕ್ಷದ ದೇವದುರ್ಲಭ ಕಾರ್ಯಕರ್ತರು ಹಾಗೂ ಪ್ರಮುಖರಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮೆಚ್ಚಿ ಮತ ನೀಡಿದ ಮತದಾರ ಪ್ರಭುಗಳಿಗೆ ನನ್ನ ವಿಶೇಷ ಧನ್ಯವಾದಗಳು” ಎಂದಿದ್ದಾರೆ.