ಅರ್ಜಿದಾರರ ಮನೆ ಬಾಗಿಲಿಗೆ ಜನನ ಮರಣ ಪ್ರಮಾಣ ಪತ್ರ ಯೋಜನೆಗೆ ಚಾಲನೆ

ಉಡುಪಿ: ನಗರಸಭೆವತಿಯಿಂದ ಜನನ ಮರಣ ಪ್ರಮಾಣಪತ್ರಗಳನ್ನು ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸುವ ವಿಶಿಷ್ಠ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಜೂನ್ 8 ರಂದು ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೂತನವಾಗಿ ಆರಂಭಿಸಿರುವ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಚೇರಿಯನ್ನು ಉದ್ಘಾಟಿಸಿದರು ಮತ್ತು ಜಿಲ್ಲಾ ಪಂಚಾಯತ್ ನ ಸಂಪನ್ಮೂಲ ಕೇಂದ್ರದಲ್ಲಿ ಮಹಿಳೆಯರಿಗಾಗಿ ನಡೆಯುತ್ತಿರುವ ಕೈ ಮಗ್ಗ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಸಂವಾದ ನಡೆಸಿ, ಕೇಂದ್ರದ ಆವರಣದಲ್ಲಿ ಸಸಿಗಳನ್ನು ನೆಟ್ಟರು.

ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಸಿಇಓ ಪ್ರಸನ್ನ ಹೆಚ್, ಎಸ್ಪಿ ಅಕ್ಷಯ್ ಎಂ ಹಾಕೆ, ಅಪರ ಜಿಲಾಧಿಕಾರಿ ವೀಣಾ ಬಿ.ಎನ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ನಗರಸಭೆ ಅಧಿಕಾರಿಗಳು, ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.