‘ಬೀರ್ ಬಲ್’ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಸಿನಿಮಾ

ಒಂದು ಕೊಲೆಯ ಸುತ್ತ ನಡೆಯುವ ಕ್ರೈಮ್ ಥ್ರಿಲ್ಲರ್ ಸಿನಿಮಾಗಳು ಕನ್ನಡದಲ್ಲಿ ಹೊಸತೇನು ಅಲ್ಲ. ಆದರೆ, ‘ಬೀರ್ ಬಲ್’ ಸಿನಿಮಾ ನೋಡುವಾಗ ಹೊಸತು ಅನಿಸುತ್ತದೆ. ‘ಬೀರ್ ಬಲ್’ ಸಿನಿಮಾದ ನಿರೂಪಣೆ ಹಾಗೂ ಮೇಕಿಂಗ್ ಸ್ಟೈಲ್  ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಒಂದು ಪಕ್ಕಾ ಸಸ್ಪೆನ್ಸ್ ಸಿನಿಮಾವಾಗಿದೆ.

ಈ ಸಿನಿಮಾ ಶುರು ಆಗುವುದು ಕೆಲ ಸಣ್ಣ ಪುಟ್ಟ ದೃಶ್ಯಗಳ ಮೂಲಕ. ಪ್ರೇಕ್ಷಕ ಸೀಟ್ ಮೇಲೆ ಕುಳಿತು ಸೆಟಲ್ ಆಗುವ ಹೊತ್ತಿಗೆನೇ ತೆರೆ ಮೇಲೆ ಒಂದು ಸಣ್ಣ ಅಪಘಾತ ನಡೆಯುತ್ತದೆ. ರಸ್ತೆಗೆ ಬಿದ್ದ ಹುಡುಗ ಮೇಲೆಳುವ ಹೊತ್ತಿಗೆ ಒಂದು ಕೊಲೆ ಆಗಿದ್ದನ್ನು ನೋಡುತ್ತಾನೆ. ಬಳಿಕ ಪೊಲೀಸರಿಗೆ ಪೋನ್ ಮಾಡಿ ವಿಷಯ ತಿಳಿಸಿಸುತ್ತಾನೆ. ಪೊಲೀಸರು ಅದೇ ಹುಡುಗನ ಮೇಲೆ ಕೋಲೆ ಕೇಸ್ ಕಟ್ಟಿ ಜೈಲಿಗೆ ಹಾಕುತ್ತಾರೆ.

8 ವರ್ಷದ ಕೇಸ್ ಓಪನ್ ಆ ಅಮಾಯಕ ಹುಡುಗನಿಗೆ ಶಿಕ್ಷೆ ಆಗುತ್ತದೆ. ಆದರೆ, 8 ವರ್ಷದ ಬಳಿಕ ಕೇಸ್ ಓಪನ್ ಮಾಡಲಾಗುತ್ತದೆ. ಲಾಯರ್ ಮಹೇಶ್ ದಾಸ್ (ಶ್ರೀನಿ) ಆ ಹುಡುಗನನ್ನು ನಿರಪರಾಧಿ ಎಂದು ಸಾಬೀತು ಮಾಡಲು ಹೊರಡುತ್ತಾನೆ. ಹೀಗಿರುವಾಗ, ಹೇಗೆ ಆ ಹುಡುಗ ತಪ್ಪು ಮಾಡಿಲ್ಲ ಎಂದು ಮಹೇಶ್ ದಾಸ್ ನಿರೂಪಿಸುತ್ತಾನೆ. ಹಾಗಾದ್ರೆ, ನಿಜವಾಗಿಯೂ ಆ ಕೊಲೆ ಮಾಡಿದವರು ಯಾರು?, ಮಹೇಶ್ ದಾಸ್ ಯಾಕೆ ಈ ಕೇಸ್ ತೆಗೆದುಕೊಳ್ಳುತ್ತಾನೆ ಎನ್ನುವುದು ಚಿತ್ರದ ಜೀವಾಳವಾಗಿದೆ.

ಒಂದು ಕೊಲೆಯ ಸುತ್ತ ನಡೆಯುವ ಕಥೆಗಳ ಅನೇಕ ಸಿನಿಮಾಗಳು ಈಗಾಗಲೇ ಅನೇಕ ಭಾಷೆಗಳಲ್ಲಿ ಬಂದಿವೆ. ಮೇಲ್ನೋಟಕ್ಕೆ ‘ಬೀರ್ ಬಲ್’ ಕೂಡ ಅದೇ ರೀತಿ ಎನಿಸಬಹುದು. ಆದರೆ, ಸಿನಿಮಾದ ಮೇಕಿಂಗ್ ಶೈಲಿ ಹಾಗೂ ನಿರೂಪಣೆ ಹೊಸತರ ಇದೆ. ಅದೇ ಕಾರಣಕ್ಕೆ ಸಿನಿಮಾ ನೋಡುಗರಿಗೆ ಹೊಸ ಅನುಭವ ನೀಡುತ್ತದೆ.

ಲಾಯರ್ ಆಗಿರೋ ನಟ ಶ್ರೀನಿ ನಟನೆ ಆ ಪಾತ್ರಕ್ಕೆ ತಕ್ಕಂತೆ ಇದೆ. ಅವರು ಚೆನ್ನಾಗಿ ಕಾಣುವುದು ಮಾತ್ರವಲ್ಲದೆ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾದ ಕೇಂದ್ರ ಬಿಂದು ಆಗಿರುವ ವಿಷ್ಣು ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿನೀತ್ ಗಮನ ಸೆಳೆಯುತ್ತಾರೆ. ಅವರ ಸರಳ ನಟನೆ ಪಾತ್ರದ ತೂಕ ಹೆಚ್ಚಿಸಿದೆ. ನಟಿ ರುಕ್ಮಿನಿ ವಸಂತ್ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.