ಬಿಲ್ಲವ-ಮೊಗವೀರ ಸಮಾಜವನ್ನು ಸಂಪೂರ್ಣ ಕಡೆಗಣಿಸಿದ ಬಜೆಟ್: ರಮೇಶ್ ಕಾಂಚನ್ ಆಕ್ರೋಶ

ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಬಿಲ್ಲವರಿಗೆ ಪ್ರತ್ಯೇಕ ನಿಗಮವನ್ನು ಮುಂದಿನ ಬಜೆಟ್ಟಿನಲ್ಲಿ ಘೋಷಣೆ ಮಾಡಿ ಅನುದಾನ ಇಡುವುದಾಗಿ ಹಾಗೂ ಮೀನುಗಾರರಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಹೇಳಿ ಪ್ರಚಾರ ಗಿಟ್ಟಿಸಿಕೊಂಡ ಮುಖ್ಯಮಂತ್ರಿ ಬೊಮ್ಮಾಯಿಯವರು ತಮ್ಮ ಬಜೆಟ್ಟಿನಲ್ಲಿ ಬಿಲ್ಲವ ಹಾಗೂ ಮೊಗವೀರ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಾವಳಿ ಪ್ರದೇಶದಲ್ಲಿ ಬಿಲ್ಲವ ಸಮುದಾಯ ಹಾಗೂ ಮೊಗವೀರ ಸಮುದಾಯವು ಅತೀ ಹೆಚ್ಚು ಪ್ರಾಬಲ್ಯವನ್ನು ಹೊಂದಿದ್ದು ಬಿಲ್ಲವರಿಗೆ ಪ್ರತ್ಯೇಕ ನಿಗಮ ಬೇಕು ಎನ್ನುವ ಬೇಡಿಕೆ ಇದ್ದರೂ ಅದಕ್ಕಾಗಿ ಹೋರಾಟಗಳು ನಡೆದರೂ ಕೂಡ ನಿಗಮದ ವಿಚಾರದಲ್ಲಿ ಒಂದೇ ಒಂದು ಶಬ್ದ ಕೂಡ ಮಾತನಾಡದಿರುವುದು ಬಿಲ್ಲವರ ಬಗ್ಗೆ ಬಿಜೆಪಿಗರ ಕಾಳಜಿ ಏನು ಎನ್ನುವುದನ್ನು ಎದ್ದು ತೋರಿಸುತ್ತದೆ.

ಕರಾವಳಿಯ ಶಾಸಕರಾದ ಸುನೀಲ್ ಕುಮಾರ್, ರಘುಪತಿ ಭಟ್ ಇವರುಗಳು ತಾವು ದೊಡ್ಡ ಸಾಧನೆ ಮಾಡಿದ್ದೇವೆ ಎಂದು ತೋರಿಸುವ ನಿಟ್ಟಿನಲ್ಲಿ ಬಿಲ್ಲವ ಮುಖಂಡರನ್ನು ಮುಖ್ಯಮಂತ್ರಿಗಳ ನಿವಾಸಕ್ಕೆ ಕರೆದುಕೊಂಡು ಹೋಗಿ ಬೊಮ್ಮಾಯಿ ಅವರಿಗೆ ಸನ್ಮಾನ ಮಾಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಿಸುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಅವರು ಬಿಲ್ಲವ ಸಮಾಜಕ್ಕೆ ಮೋಸ ಮಾಡಿದ್ದಾರೆ. ಬಜೆಟ್ ನಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆಯಾಗಿಲ್ಲ. ಬಿಲ್ಲವ ಈಡಿಗ ಸಮಾಜವನ್ನು ಕಡೆಗಣನೆ ಮಾಡಲಾಗಿದೆ. ರಾಜ್ಯದಲ್ಲಿ ಬಿಲ್ಲವ ಈಡಿಗ ಸಮಾಜದ 60 ಲಕ್ಷ ಜನರಿದ್ದಾರೆ. ರಾಜ್ಯ ಸರ್ಕಾರ ಮಾಡಿದ ಈ ಮೋಸಕ್ಕೆ ಮುಂದಿನ ದಿನಗಳಲ್ಲಿ ಬಿಲ್ಲವರು ತಕ್ಕ ಉತ್ತರ ನೀಡುತ್ತಾರೆ.

ಅದೇ ರೀತಿ ಮೊಗವೀರ ಸಮುದಾಯಕ್ಕೆ ನೀಡಲಾಗಿರುವ ಮತ್ಯ್ಸಾಶ್ರಯ ಮನೆಗಳನ್ನು ಕೂಡ ಹೆಚ್ಚಳ ಮಾಡುವ ಕುರಿತು ಯಾವುದೇ ವಿಚಾರ ಬಜೆಟ್ನಲ್ಲಿ ಇಲ್ಲ. ಈ ಹಿಂದಿನ ಎರಡು ಬಜೆಟ್ ಗಳಲ್ಲಿ ಘೋಷಣೆಯಾಗಿದ್ದ ಮನೆಗಳು ಸಹ ಮೀನುಗಾರರಿಗೆ ಸರಿಯಾಗಿ ಲಭಿಸಿಲ್ಲ.
ರೈತ ಸಮುದಾಯ ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಬೆಳೆದ ಬೆಳೆ ಕೈಗೆ ಬಾರದೆ ನಷ್ಟ ಅನುಭವಿಸುತ್ತಿದ್ದು, ಇನ್ನೊಂದೆಡೆ ಭತ್ತ ಹಾಗೂ ಇತರ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆ ಕೂಡ ನೀಡುವ ಕುರಿತು ಬಜೆಟ್ನಲ್ಲಿ ಯಾವುದೇ ರೀತಿಯ ಘೋಷಣೆಗಳಿಲ್ಲ. ರೈತರನ್ನು ಅವರ ಸಮಸ್ಯೆಗಳಿಂದ ಮೇಲಕ್ಕೆ ಎತ್ತುವುದು ಬಿಡಿ ಅವರ ಬಗ್ಗೆ ಆಸಕ್ತಿಯೇ ಇಲ್ಲ ಎನ್ನುವಂತೆ ಬಜೆಟ್ ಮಂಡಿಸಿದ್ದಾರೆ. ಸತತ ಎರಡು ದಿನ ರಾಜ್ಯದಾದ್ಯಂತ ಪೌರಕಾರ್ಮಿಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿದ್ದು, ಪೌರಕಾರ್ಮಿಕರ ಖಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ ಅವರೇ ಮಂಡಿಸಿದ ಬಜೆಟ್ನಲ್ಲಿ ಈ ಬಗ್ಗೆ ಚಕಾರವೆತ್ತದಿರುವುದು ಪೌರಕಾರ್ಮಿಕರಿಗೆ ಎಸಗಿದ ದ್ರೋಹವಾಗಿದೆ.

ಚುನಾವಣೆಗಾಗಿ ಬಣ್ಣ ಬಣ್ಣದ ಘೋಷಣೆ ಮಾಡಿ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನದಲ್ಲಿದ್ದಾರೆ ಅಷ್ಟೇ. ಯಾವುದೇ ಯೋಜನೆ ಬಗ್ಗೆ ಕೇಳಿದರೂ ಅನುದಾನವಿಲ್ಲ, ಹಣವಿಲ್ಲ ಎನ್ನುವವರ ಬಜೆಟ್ನಿಂದ ನಿರೀಕ್ಷೆ ಇಟ್ಟುಕೊಳ್ಳುವುದು ವ್ಯರ್ಥವಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಬಜೆಟನ್ನು ಕೇವಲ ಭರವಸೆಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಮುಖ್ಯಮಂತ್ರಿಗಳು ಓದಿರುವ ಬಜೆಟ್ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನವಷ್ಟೇ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.