ಶ್ರೀ ನಾರಾಯಣ ಗುರುಗಳ ಸಂದೇಶ ಸಾರುವ ಬೈಕ್ ರ್ಯಾಲಿಗೆ ಅನುಮತಿ ಕೊಡದ ಇಲಾಖೆ ಬಗ್ಗೆ ಬಿಲ್ಲವರು ಗರಂ!

ಕುಂದಾಪುರ: ಶ್ರೀ ನಾರಾಯಣ ಗುರು ಸಂದೇಶ ಸಾರುವ ಸಲುವಾಗಿ ಭಾನುವಾರ ನಡೆಯಲಿದ್ದ ಬೈಕ್ ರ್ಯಾಲಿಗೆ ಅನುಮತಿ ನಿರಾಕರಿಸಿದ ಬಗ್ಗೆ ಬಿಲ್ಲವ ಸಮಾಜದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಂತಿ ಭಂಗದ ನೆಪವೊಡ್ಡಿ ಅನುಮತಿ ನೀಡದ ಇಲಾಖೆ ವಿರುದ್ಧ ಬಿಲ್ಲವ ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ, ಮಂಜು ಬಿಲ್ಲವ ಸಹಿತ ಇತರರು ಆಕ್ರೋಷ ವ್ಯಕ್ತಪಡಿಸಿದರು.
ಶನಿವಾರ ಸಂಜೆಯವರೆಗೂ ಬಿಲ್ಲವ ಸಮಾಜದ ಮುಖಂಡರು ಹಾಗೂ ಸಚಿವ ಶಾಸಕರ ಮೂಲಕವು ಜಿಲ್ಲಾಡಳಿತದ ಬಳಿ ಬೈಕ್ ರ್ಯಾಲಿಗೆ ಅನುಮತಿ ನೀಡುವಂತೆ ಮನವಿ ಮಾಡಿದರೂ ಕೂಡ ಅನುಮತಿ ನೀಡಿರಲಿಲ್ಲ. ಬಳಿಕ ಸಮಾಜದವರು ಕಾರು ಹಾಗೂ ರಿಕ್ಷಾ ರ್ಯಾಲಿ ಮೂಲಕ ಶ್ರೀ ನಾರಾಯಣ ಗುರು ಸಂದೇಶ ಸಾರುವಲ್ಲಿ ಯಶಸ್ವಿಯಾದರು. ಕುಂದಾಪುರದಲ್ಲಿ ಮುಖಂಡ ಅಶೋಕ್ ಪೂಜಾರಿ, ಪ್ರಕಾಶ ಪೂಜಾರಿ  ಜಾಥಾಗೆ ಚಾಲನೆ ನೀಡಿದರು.ನೂರಾರು ಕಾರುಗಳ ಮೂಲಕ ಯಶಸ್ವಿಯಾಗಿ ಜಾಥಾ ನಡೆಯಿತು.
ಹಲವು ವರ್ಷಗಳಿಂದ ಬೈಕ್ ರ್ಯಾಲಿ ನಡೆಸಿ ತೆಕ್ಕಟ್ಟೆ, ವಂಡ್ಸೆ, ನೇರಳಕಟ್ಟೆ ಮೊದಲಾದ ಗ್ರಾಮೀಣ ಭಾಗದಲ್ಲಿ ಗುರುಗಳ ಸಂದೇಶ ಸಾರುವ ಕೆಲಸ ಮಾಡುತ್ತಿದ್ದೆವು. ಆದರೆ ಈ ಬಾರಿ ಜಿಲ್ಲಾಡಳಿತದ ಈ ವರ್ತನೆಯಿಂದ ತುಂಬಾ ನೋವು, ಬೇಸರವಾಗಿದೆಯೆಂದು ಬಿಲ್ಲವ ಮುಖಂಡರು ಮಾಧ್ಯಮಗಳಿಗೆ ತಿಳಿಸಿದ್ದಾರೆ.