ಆನ್ ಲೈನ್ ಗೇಮ್ಸ್ ಗಳಿಗೆ ನಿಯಂತ್ರಣ ಹೇರುವ ಮಸೂದೆಗೆ ಅನುಮೋದನೆ

ನವದೆಹಲಿ: ಆನ್‌ಲೈನ್‌ ಗೇಮಿಂಗ್‌ ವೇದಿಕೆಗಳನ್ನು ನಿಯಂತ್ರಿಸುವ ಉದ್ದೇಶದ ‘ಆನ್‌ಲೈನ್‌ ಗೇಮಿಂಗ್‌ ಮಸೂದೆ’ಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.‘ಆನ್‌ಲೈನ್‌ ಗೇಮಿಂಗ್‌ ಉತ್ತೇಜನ ಮತ್ತು ನಿಯಂತ್ರಣ ಮಸೂದೆ-2025’ ಅನ್ನು ಸಂಸತ್‌ನಲ್ಲಿ ಬುಧವಾರ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಆನ್‌ಲೈನ್‌ ಬೆಟ್ಟಿಂಗ್‌ ಅನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವುದು, ಹಣ ಆಧಾರಿತ ಎಲ್ಲ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವುದು, ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ಹಣಕಾಸು ವ್ಯವಹಾರ ನಡೆಸಲು ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಅನುಮತಿ ನೀಡದಿರುವುದು ಸೇರಿ ಹಲವು ಅವಕಾಶಗಳನ್ನು ಈ ಮಸೂದೆ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.