ಉಡುಪಿ: ಮಕ್ಕಳಿಗೆ, ಯುವ ಜನತೆಗೆ ನೈತಿಕ ಸಂದೇಶ ಬಿತ್ತಲು ನಮ್ಮ ಪೌರಾಣಿಕ ಪ್ರಸಂಗಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಅದು ಯಕ್ಷಗಾನವಿರಬಹುದು, ನಾಟಕವೇ ಆಗಿರಬಹುದು ಪುರಾಣ ಪ್ರಸಂಗಳಲ್ಲಿ ಅಡಕವಾಗಿರುವ ಸತ್ಯ, ಧರ್ಮ, ನಿಷ್ಠೆ, ಪ್ರಾಮಾಣಿಕತೆ ಮೊದಲಾದ ಮೌಲ್ಯಗಳು ನೈತಿಕ ಪ್ರಜ್ಞೆಯನ್ನು ಬಡಿದೆಬ್ಬಿಸುವ ಶಕ್ತಿಯನ್ನು ಹೊಂದಿವೆ. ನಾವು ನಂಬಿರುವ ದೇವರು, ದೈವಗಳ ಇರಿಹಾಸವನ್ನು ಇಂದು ನಾಟಕ, ಯಕ್ಷಗಾನಗಳಲ್ಲಿ ಕಟ್ಟಿಕೊಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಶನಿವಾರ ಉಪ್ಪೂರಿನ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ಗುರುವಸಂತಿ ಸಾಂಸ್ಕೃತಿಕ ವೇದಿಕೆ ಮಣಿಪಾಲ ಇದರ ದಶಮಾನೋತ್ಸವದ ಸಂಭ್ರಮಾಚರಣೆಯ ಪರ್ವದಲ್ಲಿ ಜಯರಾಮ್ ಮಣಿಪಾಲ ಅವರ ‘ಬಿಕ್ರಮ ಭಜರಂಗಿ’ ಪೌರಾಣಿಕ ನಾಟಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಇಂದಿನ ಆಧುನಿತೆಯ ಶಿಕ್ಷಣದ ಜೊತೆಗೆ ಮಕ್ಕಳಿಗೆ, ಯುವಜನತೆಗೆ ಉತ್ತಮ ಮೌಲ್ಯಗಳನ್ನು ತಿಳಿಯ ಪಡಿಸುವ ಶಕ್ತಿ ರಂಗಭೂಮಿ, ಯಕ್ಷಗಾನಕ್ಕಿದೆ. ಈ ಹಿನ್ನಲೆಯಲ್ಲಿಯೇ ಮಕ್ಕಳಿಗೆ ಯಕ್ಷ ಶಿಕ್ಷಣ ಹಾಗೂ ರಂಗ ಶಿಕ್ಷಣವನ್ನು ಕೊಡಲಾಗುತ್ತಿದೆ. ರಂಗಭೂಮಿ ಉಡುಪಿ ಈ ವರ್ಷ 25 ಶಾಲೆಗಳಲ್ಲಿ ರಂಗ ಶಿಕ್ಷಣವನ್ನು ಕೊಡುವ ಗುರಿಯನ್ನು ಹೊಂದಿದೆ. ನಮ್ಮೆಲ್ಲರ ಉದ್ದೇಶ ಒಂದೇ ಸುಂಸ್ಕೃತ ಸಮಾಜದ ನಿರ್ಮಾಣ. ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿದರಷ್ಠೇ ಸಾಲದು. ತಂದೆತಾಯಿ ಅವರಿಗಾಗಿ ಪಡುವ ಸಂಕಷ್ಟಗಳನ್ನು ಅವರಿಗೆ ಮನದಟ್ಟು ಮಾಡಬೇಕು. ಇಂದು ಹೆಜ್ಜೆಗೊಂದು ಅನಾಥಾಶ್ರಮಗಳು, ವೃದ್ಧಾಶ್ರಮಗಳನ್ನು ಕಂಡಾಗ, ಅದರಲ್ಲಿರುವ ಹಿರಿಯ ಜೀವಗಳನ್ನು ಕಂಡಾಗ ಬಹುತೇಕ ಒಂದೇ ಉತ್ತರ ನಮ್ಮ ಮಕ್ಕಳಿಗೆ ನಾವು ಬೇಡವಾಗಿದ್ದೇವೆ ಎಂಬುದೇ ಆಗಿದೆ. ಇದು ನಿಲ್ಲಬೇಕು. ವೃದ್ಧಾಪ್ಯದಲ್ಲಿ ವೃದ್ಧಾಶ್ರಮವನ್ನು ಸೇರಬಾರದು ಎಂದು ಬಯಸುವ ಹೆತ್ತವರು, ಮಕ್ಕಳಿಗೆ ಬಾಲ್ಯದಲ್ಲಿಯೇ ನೈತಿಕ ಮೌಲ್ಯಗಳನ್ನು ಕಲಿಸಿ. ಮಕ್ಕಳನ್ನು ನಾಟಕ, ಯಕ್ಷಗಾನ, ಭಜನೆ, ಜಾನಪದ ರಂಗಕಲೆ ಪ್ರದರ್ಶನಕ್ಕೆ ಕರೆದುಕೊಂಡು ಹೋಗಿ ಅವರಲ್ಲಿ ಆಸಕ್ತಿ ಹುಟ್ಟಿಸಿ ಎಂದು ಡಾ.ತಲ್ಲೂರು ಹೇಳಿದರು.
ಈ ಸಂದರ್ಭದಲ್ಲಿ ಜಯರಾಮ್ ಮಣಿಪಾಲ ಅವರು ರಚಿಸಿರುವ ‘ಬಿಕ್ರಮ ಭಜರಂಗಿ ‘ ಪೌರಾಣಿಕ ನಾಟಕವನ್ನು ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ರಾಮಾಂಜನೇಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪರಮೇಶ್ವರ ಮುದ್ದೋಡಿ ಶುಭಾಶಂಸನೆಗೈದರು. ಉಡುಪಿಯ ಉಷಾ ಮ್ಯಾರೇಝ್ ಬ್ಯುರೋದ ಎಂಡಿ ಸುಗುಣ ಕುಮಾರ್, ಶ್ರೀ ದುರ್ಗಾಪರಮೇಶ್ವರಿ ಕೋಅಪರೇಟಿವ್ ಸೊಸೈಟಿ ಪರ್ಕಳ ಇದರ ಅಧ್ಯಕ್ಷ ಅಶೋಕ್ ಕಾಮತ್ ಕೊಡಂಗೆ, ಸಿವಿಲ್ ಇಂಜೀನಿಯರ್ ಪರಮೇಶ್ವರ ಪರ್ಕಳ, ಉಡುಪಿ ತಾಲೂಕು ಪಂಚಾಯಿತಿಯ ಮಾಜಿ ಸದಸ್ಯ ಸತ್ಯಾನಂದ ನಾಯಕ್, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್.ಪಿ., ರಾಮಾಂಜನೇಯ ದೇವಳದ ಅಧ್ಯಕ್ಷ ಕೆ.ಪಿ.ನಾಯಕ್, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾಧ್ಯ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಸುಗುಣ ಕುಮಾರ್ ಅವರಿಗೆ ಅಭಿನಂದನೆ ನಡೆಯಿತು. ಸಂತೋಷ್ ಸಗ್ರಿ ಕಾರ್ಯಕ್ರಮ ನಿರೂಪಿಸಿ, ಜಯರಾಮ ಮಣಿಪಾಲ ವಂದಿಸಿದರು.












