ಪುತ್ತೂರು: ಜಾತ್ರೆಗೆ ಹೋಗಿ ವಾಪಾಸು ಬರುತ್ತಿದ್ದ ವೇಳೆ ಬೈಕ್ ಅಪಘಾತಕ್ಕೀಡಾದ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಮತ್ತೋರ್ವ ವಿದ್ಯಾರ್ಥಿ ಗಂಭೀರಗಾಯಗೊಂಡ ಘಟನೆ ಸವಣೂರು ಪುತ್ತೂರು ರಸ್ತೆಯ ಮಾಂತೂರು ಎಂಬಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.
ಮಡಿಕೇರಿ ಸೋಮವಾರ ಪೇಟೆ ನಿವಾಸಿ ಬೋಜಪ್ಪ ಮತ್ತು ಉಮಾವತಿ ದಂಪತಿ ಪುತ್ರ ಚೇತನ್ ಮೃತಪಟ್ಟ ವಿದ್ಯಾರ್ಥಿ. ಈತ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದನು. ಈತನ ಸ್ನೇಹಿತ ಬೆಳ್ಳಾರೆ ನಿವಾಸಿ ಸುದೀಪ್ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಚೇತನ್ ತನ್ನ ಸ್ನೇಹಿತ ಸುದೀಪ್ ಜತೆ ನಿನ್ನೆ ಮಾಣಿ ಸಾದಿಕುಕ್ಕು ಜಾತ್ರೆಗೆ ಹೋಗಿದ್ದನು. ಬಳಿಕ ರಾತ್ರಿ ಸುದೀಪ್ ಬೆಳ್ಳಾರೆ ಮನೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಇಬ್ಬರನ್ನು ಆಟೋ ರಿಕ್ಷಾದಲ್ಲಿ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಚೇತನ್ ದಾರಿ ಮಧ್ಯೆ ಅಸುನೀಗಿದ್ದು, ಗಂಭೀರ ಗಾಯಗೊಂಡಿದ್ದ ಸುದೀಪ್ ಅಲ್ಲಿಂದ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.

















