ಮಂಗಳೂರು: ಜ. 14-15 ರಂದು ಬಿಕರ್ನಕಟ್ಟೆ ಬಾಲ ಯೇಸುವಿನ ವಾರ್ಷಿಕ ಮಹೋತ್ಸವ

ಮಂಗಳೂರು : ಬಾಲ ಯೇಸುವಿನ ಪುಣ್ಯಕ್ಷೇತ್ರ ಕಾರ್ಮೆಲ್ ಹಿಲ್ ಬಿಕರ್ನಕಟ್ಟೆ ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ಅದ್ದೂರಿಯಿಂದ ಆಚರಿಸಲಾಗುವುದು ಎಂದು ಗುರುಕುಲ ಮುಖ್ಯಸ್ಥ ವಂದನೀಯ ಮೆಲ್ವಿನ್‌ ಡಿ ಕುನ್ಹಾ ತಿಳಿಸಿದರು.

ಅವರು ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ವಾರ್ಷಿಕ ಮಹೋತ್ಸವ ಸಂಭ್ರಮದ ಬಲಿ ಪೂಜೆಗಳು

ಜನವರಿ 14ರಂದು ಸಂಜೆ 6 ಘಂಟೆಗೆ ಮಹೋತ್ಸವ ಸಂಭ್ರಮದ ಬಲಿ ಪೂಜೆಯನ್ನು ಜೈಪುರ ಧರ್ಮ ಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಅತೀ ವಂದನೀಯ ಒಸ್ವಾಲ್ಡ್ ಜೋಸೆಫ್ ಲೂವಿಸ್ ನೆರವೇರಿಸುವರು. ಅದೇ ದಿನ ಬೆಳಿಗ್ಗೆ 10.30 ಘಂಟೆಗೆ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾ, ಅತ್ತೂರು-ಕಾರ್ಕಳ ಇದರ ರೆಕ್ಟರ್ ವಂದನೀಯ ಆಲ್ಬನ್‌ ಡಿಸೋಜಾ ನೆರವೇರಿಸುವರು.ಇದು ಅನಾರೋಗ್ಯದಿಂದ ಬಳಲುವವರಿಗಾಗಿ ಹಾಗೂ ಹಿರಿಯರಿಗಾಗಿ ವಿಶೇಷ ಪ್ರಾರ್ಥನಾ ವಿಧಿಯಾಗಿರುವುದು.

ಜನವರಿ 15 ರಂದು ಬೆಳಿಗ್ಗೆ10.30 ಘಂಟೆಗೆ ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಫ್ರಾನ್ಸಿಸ್ ಸೆರಾವೊ ಬಲಿಪೂಜೆಯನ್ನು ನೆರವೇರಿಸಲಿರುವರು. ಇದು ಮಕ್ಕಳಿಗಾಗಿ ನೆರವೇರಿಸುವ ವಿಶೇಷ ಬಲಿಪೂಜೆಯಾಗಿರುವುದು. ಮಹೋತ್ಸವದ ಸಮಾರೋಪ ಪ್ರಾರ್ಥನಾ ವಿಧಿಯು ಸಂಜೆ 6 ಘಂಟೆಗೆ ಕಾರ್ಮೆಲ್ ಸಭೆಯ ಸಹಾಯಕ ಪ್ರಾಂತ್ಯಾಧಿಕಾರಿ ಅತೀ ವಂದನೀಯ ಆರ್ಚಿಬಾಲ್ಡ್ ಗೊನ್ಸಾಲ್ವಿಸ್‌ ನೆರವೇರಿಸಲಿರುವರು.

ಜನವರಿ 14 ರಂದು ಜರಗುವ ಇತರ ಬಲಿ ಪೂಜೆಗಳ ವೇಳಾಪಟ್ಟಿ ಹೀಗಿದೆ:
ಬೆಳಿಗ್ಗೆ 6 ಕ್ಕೆ (ಕೊಂಕಣಿ), 7.30 ಕ್ಕೆ (ಇಂಗ್ಲಿಷ್), 9 ಕ್ಕೆ (ಕೊಂಕಣಿ), 1 ಕ್ಕೆ (ಕನ್ನಡ). ಅದೇ ದಿನ 10.30 ಘಂಟೆಗೆ ಅನಾರೋಗ್ಯದಿಂದ ಬಳಲುವವರಿಗಾಗಿ ವಿಶೇಷ ಬಲಿಪೂಜೆ ಕೊಂಕಣಿಯಲ್ಲಿ ನೆರವೇರಲಿರುವುದು.

ವಾರ್ಷಿಕ ಹಬ್ಬದ ಎರಡನೆಯ ದಿನ – ಜನವರಿ 15 ರಂದು ಬೆಳಿಗ್ಗೆ 6.30, 7.30, 9 ಘಂಟೆಗೆ ಕೊಂಕಣಿಯಲ್ಲಿ, 10.30ಗೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ 1 ಘಂಟೆಗೆ ಮಲಯಾಳಂ ಭಾಷೆಯಲ್ಲಿ ಪೂಜೆಯು ನೆರವೇರಲಿರುವುದು.

ಒಂಬತ್ತು ದಿನಗಳ ನೊವೇನಾ ಪ್ರಾರ್ಥನೆ:

ಈ ಎರಡು ದಿನಗಳ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ –ನೊವೇನಾ ಪ್ರಾರ್ಥನೆಯು ಜನವರಿ 5 ರಿಂದಜನವರಿ 13೩ ರ ವರೆಗೆ ನಡೆಯುವುದು. ಆ ದಿನಗಳಲ್ಲಿ ಪ್ರತಿದಿನ 9 ಬಲಿ ಪೂಜೆಗಳು ನಡೆಯುವುವು. ಬೆಳಿಗ್ಗೆ 6, 7.30, 9, 10.30 ಹಾಗೂ ಮಧ್ಯಾಹ್ನ 1 ಘಂಟೆಗೆ ಕೊಂಕಣಿ ಭಾಷೆಯಲ್ಲಿ, ಸಂಜೆ 4 ಘಂಟೆಗೆ ಮಲಯಾಳಂ, 5 ಘಂಟೆಗೆ ಇಂಗ್ಲಿಶ್ ಹಾಗೂ 7.30 ಘಂಟೆಗೆ ಕನ್ನಡದಲ್ಲಿ ಬಲಿಪೂಜೆಯು ನಡೆಯಲಿರುವುದು.ಈ ಒಂಬತ್ತು ದಿನಗಳ ಪ್ರಮುಖ ಬಲಿಪೂಜೆಯು ಸಂಜೆ 6 ಘಂಟೆಗೆ ಪುಣ್ಯ ಕ್ಷೇತ್ರದ ಮೈದಾನದಲ್ಲಿ ನಡೆಯಲಿರುವುದು.

ಕ್ರಿಸ್ತ ಪ್ರಸಾದದ ಆರಾಧನೆ: ಪ್ರತಿ ನೋವೆನಾ ದಿನಗಳಲ್ಲಿ 11.30 ರಿಂದ 12.45 ಘಂಟೆಯವರೆಗೆ ನಡೆಯಲಿರುವುದು. ಈ ಸಂದರ್ಭದಲ್ಲಿ ವಿವಿಧ ಅಗತ್ಯಗಳಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು.

ಹೊರೆಕಾಣಿಕೆ: ಮಹೋತ್ಸವದ ಅಂಗವಾಗಿ ಹೊರೆಕಾಣಿಕೆಯು ಜನವರಿ 4 ರಂದು ಸಂಜೆ 4.30 ಘಂಟೆಗೆ ಕುಲಶೇಖರದ ಹೋಲಿ ಕ್ರಾಸ್‌ ಚರ್ಚಿನಿಂದ ಆರಂಭಗೊಳ್ಳುವುದು. ಹೊರೆಕಾಣಿಯ ಅಂತಿಮ ಭಾಗದಲ್ಲಿ ಸರ್ವಧರ್ಮ ಪ್ರಾರ್ಥನಾ ಕೂಟ ಹಾಗೂ ಧ್ವಜಾರೋಹಣ ಪುಣ್ಯಕ್ಷೇತ್ರದ ಅಂಗಳದಲ್ಲಿ ನಡೆಯುವುದು.

ಅನ್ನಸಂತರ್ಪಣೆ: ನೊವೇನಾ ಹಾಗೂ ಹಬ್ಬದ ದಿನಗಳಲ್ಲಿ (ಜನವರಿ 5 ರಿಂದ 15ರ ವರೆಗೆ) ಪ್ರತೀ ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆಯು ನಡೆಯುವುದು.

ರಕ್ತದಾನ ಶಿಬಿರ: ಜನವರಿ 11 ಮತ್ತು 12 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1 ಘಂಟೆಯವರೆಗೆ ರಕ್ತದಾನ ಶಿಬಿರವನ್ನುಕೂಡಾ ಏರ್ಪಡಿಸಲಾಗಿದೆ.

ಪ್ರತಿಕಾಗೋಷ್ಠಿಯಲ್ಲಿ ಕ್ಷೇತ್ರದ ನಿರ್ದೇಶಕ ವಂದನೀಯ ಸ್ವೀಫನ್ ಪಿರೇರಾ, ಕಾರ್ಮೆಲ್ ಸಭೆ ಪ್ರಾಂತೀಯ ಪ್ರತಿನಿಧಿ ವಂದನೀಯ ದೀಪ್ ಫೆರ್ನಾಂಡೀಸ್, ವಂದನೀಯ ರುಡಾಲ್ಫ್ ಡಿಸೋಜಾ, ಮಾಧ್ಯಮ ಪ್ರತಿನಿಧಿ ಸ್ಟ್ಯಾನ್ಲಿ ಬಂಟ್ವಾಳ್ ಉಪಸ್ಥಿತರಿದ್ದರು.

ಸಂಪರ್ಕ: 9844503706