ಬಿಹಾರ: ಸತತ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್ ಪ್ರಮಾಣ ವಚನ ಸ್ವೀಕಾರ

ಬಿಹಾರ: ಸತತ ನಾಲ್ಕನೇ ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ 7 ನೇ ಬಾರಿಗೆ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಹಾರದ ರಾಜ್ಯಪಾಲ ಫಗು ಚೌಹಾಣ್ ನಿತೀಶ್ ಕುಮಾರ್​ಗೆ ಪ್ರಮಾಣವಚನ ಭೋದಿಸಿದ್ದಾರೆ.

ಇನ್ನು ಬಿಹಾರ ಉಪಮುಖ್ಯಮಂತ್ರಿಗಳಾಗಿ ಬಿಜೆಪಿಯ ತಾರ್​ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸಮಾರಂಭದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ ಹಾಜರಿದ್ದರು. ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 74 ಕ್ಷೇತ್ರಗಳಲ್ಲಿ ಗೆದ್ದಿದೆ. ಜೆಡಿಯು ಗೆದ್ದಿರುವ ಕ್ಷೇತ್ರಗಳ ಸಂಖ್ಯೆ 43 ಮಾತ್ರ. ಎನ್‌ಡಿಎ ಅಂಗ ಪಕ್ಷಗಳಾದ ಎಚ್‌ಎಎಂ ಮತ್ತು ವಿಐಪಿ ತಲಾ ನಾಲ್ಕು ಕ್ಷೇತ್ರಗಳಲ್ಲಿ ಗೆದ್ದಿವೆ. ಹೀಗಾಗಿ, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎಗೆ 125 ಸದಸ್ಯರ ಬೆಂಬಲ ಇದೆ.