ಪಾಟ್ನಾ: ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ರಚನೆಯಾಗಲಿರುವ ನೂತನ ಸರ್ಕಾರದ ಭಾಗವಾಗುವುದಿಲ್ಲ ಎಂದು ಹಿಂದೂಸ್ತಾನ್ ಆವಂ ಮೋರ್ಚಾ ಸಂಸ್ಥಾಪಕ ಜಿತನ್ ರಾಮ್ ಮಾಂಜಿ ಹೇಳಿದ್ದಾರೆ.
ಎನ್ ಡಿಎ ಮೈತ್ರಿಕೂಟದ ಜತೆ ಸ್ಪರ್ಧಿಸಿದ ಮಾಂಜಿ ಅವರ ಹಿಂದೂಸ್ತಾನ್ ಆವಂ ಮೋರ್ಚಾ ಪಕ್ಷ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಹೊಸ ಸರ್ಕಾರದ ಭಾಗವಾಗುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಾನು ಈ ಹಿಂದೆ ಸಿಎಂ ಆಗಿದ್ದೆ. ಹೀಗಾಗಿ ಯಾವುದೇ ಕಾರಣಕ್ಕೂ ನಿತೀಶ್ ಕುಮಾರ್ ಸಂಪುಟದಲ್ಲಿ ಸಚಿವರಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಹೊಸದಾಗಿ ಆಯ್ಕೆಯಾದ ನಾಲ್ವರು ಶಾಸಕರು ಮಾಂಜಿ ಅವರ ನಿವಾಸದಲ್ಲಿ ಭೇಟಿಯಾದರು. ಈ ವೇಳೆ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಮಾಂಜಿ ಅವರ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳಲಾಯಿತು.