ಉಡುಪಿ: ಗುರುವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಕೊರೊನಾ ಪಾಸಿಟಿವ್ ಆದ ಕುಂದಾಪುರ ತಾಲ್ಲೂಕಿನ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತ ಇಂದು ನಗರದ ಬೀಡಿನಗುಡ್ಡೆ ಸ್ಮಶಾನದಲ್ಲಿ ನೆರವೇರಿಸಿತು.
54 ವರ್ಷದ ವ್ಯಕ್ತಿ ಈಚೆಗೆ ಮುಂಬೈನಿಂದ ಜಿಲ್ಲೆಗೆ ಬಂದಿದ್ದು, ಅವರು ಸಹಿತ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉದ್ಯಾವರ ಎಸ್ ಡಿಎಂನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಆದರೆ ವ್ಯಕ್ತಿಗೆ ಮೇ 13 ರಂದು ಹೃದಯಾಘಾತವಾಗಿದ್ದು, ಮೇ 14ರಂದು ಮಣಿಪಾಲ ಕೆಎಂಸಿ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕ್ವಾರಂಟೈನ್ ನಲ್ಲಿ ಇದ್ದ ಕಾರಣ ವ್ಯಕ್ತಿ ಗಂಟಲಿನ ಮಾದರಿಯನ್ನು ಕೊರೊನಾ ಪರೀಕ್ಷೆ ಕಳುಹಿಸಲಾಗಿತ್ತು. ಅದರ ವರದಿ ಶನಿವಾರ ಬಂದಿದ್ದು, ಅದರಲ್ಲಿ ಪಾಸಿಟಿವ್ ಎಂದು ದೃಢಪಟ್ಟಿತ್ತು.
ಮೃತ ವ್ಯಕ್ತಿಯ ಕಡೆಯಿಂದ ಹಾಗೂ ಪತ್ನಿಯ ಕಡೆಯಿಂದ ಅಂತ್ಯಕ್ರಿಯೆ ಮಾಡಲು ಯಾರು ಮುಂದೆ ಬರಲಿಲ್ಲ. ಹಾಗಾಗಿ ಜಿಲ್ಲಾಡಳಿತದ ವತಿಯಿಂದ ಪತ್ನಿ, ಮಕ್ಕಳು ಹಾಗೂ ನಿಕಟ ಸಂಬಂಧಿಗಳ ಒಪ್ಪಿಗೆ ಪಡೆದು ಇಂದು ಮಧ್ಯಾಹ್ನ ಬೀಡಿನಗುಡ್ಡೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ತಿಳಿದುಬಂದಿದೆ.