ರಾಷ್ಟ್ರದ ಪ್ರಪ್ರಥಮ ಚಾಟ್‌ಬಾಟ್ ‘Krutrim AI’ ಪ್ರಾರಂಭಿಸಿದ ಓಲಾ ಮುಖ್ಯಸ್ಥ: 10 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಲಭ್ಯ

ಹೊಸದಿಲ್ಲಿ: ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ಸೋಮವಾರದಂದು ಭಾರತದ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ‘Krutrim AI’ ಅನ್ನು ಪ್ರಾರಂಭಿಸಿದ್ದಾರೆ. ಓಪನ್‌ಎಐನ ಚಾಟ್‌ಜಿಪಿಟಿ (ChatGpt) ಮತ್ತು ಗೂಗಲ್‌ನ ಜೆಮಿನಿ(Gemini)ಗೆ ಪೈಪೋಟಿಯನ್ನು ನೀಡಲು Krutrim AI ಅನ್ನು ಅಭಿವೃದ್ದಿ ಪಡಿಸಲಾಗಿದೆ.

AI ಚಾಟ್‌ಬಾಟ್ ಈಗ ಸಾರ್ವಜನಿಕ ಬೀಟಾ ವರ್ಷನ್ ನಲ್ಲಿ ಹೊರಹೊಮ್ಮುತ್ತಿದೆ.

“ಭರವಸೆ ನೀಡಿದಂತೆ, ಇಂದು Krutrim AI ಸಾರ್ವಜನಿಕ ಬೀಟಾ ರೋಲ್‌ಔಟ್ ಅನ್ನು ಪ್ರಾರಂಭಿಸುತ್ತಿದೆ” ಎಂದು ಅಗರ್ವಾಲ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದು ನಮಗೆ, ನಮ್ಮ ಮೊದಲನೆ ತಲೆಮಾರಿನ ಉತ್ಪನ್ನವಾಗಿ ಪ್ರಾರಂಭವಾಗಿದೆ. ಇನ್ನೂ ಸಾಕಷ್ಟು ಉತ್ಪನ್ನಗಳು ಬರಲಿದೆ ಮತ್ತು ಇದರ ಆಧಾರದಲ್ಲಿ ಈ ಸೇವೆ ಗಮನಾರ್ಹವಾಗಿ ಸುಧಾರಿಸಲಿದೆ. ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ನೀಡಿ ಎಂದು ಅವರು ಹೇಳಿಕೊಂಡಿದ್ದಾರೆ.

ಇಂಗ್ಲಿಷ್, ಹಿಂದಿ, ತಮಿಳು, ಬೆಂಗಾಲಿ, ಮರಾಠಿ, ಕನ್ನಡ, ಗುಜರಾತಿ ಮತ್ತು ಹಿಂಗ್ಲಿಷ್ (ಹಿಂದಿ ಮತ್ತು ಇಂಗ್ಲಿಷ್ ಮಿಶ್ರಣ) ಸೇರಿದಂತೆ 10 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಚಾಟ್‌ಬಾಟ್ ಬಳಕೆದಾರರಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಮೊದಲನೆ ಸುತ್ತಿನ ನಿಧಿ ಸಂಗ್ರಹಣೆಯಲ್ಲಿ ರಾಷ್ಟ್ರದ ಪ್ರಪ್ರಥಮ ಮತ್ತು ಅತಿವೇಗದ AI ಯೂನಿಕಾರ್ನ್ ಆಗಿ ಹೊರಹೊಮ್ಮಿದ ಬಳಿಕ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.