ಭಾರತ್ ಬಂದ್ :ಉಡುಪಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಉಡುಪಿ:  ವಿವಿಧ ಕಾರ್ಮಿಕ ಸಂಘಟನೆಗಳು ಎರಡು ದಿನ ಕರೆ ನೀಡಿರುವ ಭಾರತ್ ಬಂದ್ ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಡುಪಿ ನಗರ ಸೇರಿದಂತೆ ಜಿಲ್ಲೆಯ ಉಳಿದೆಡೆಗಳಲ್ಲಿ ಮಂಗಳವಾರ ಶಾಂತಿಯುತ ಬಂದ್ ನಡೆಯಿತು.
ಮುಂಜಾನೆ ಉಡುಪಿಯಿಂದ ಧರ್ಮಸ್ಥಳಕ್ಕೆ 1, ಕಾರ್ಕಳ 3 ಹಾಗೂ ಮಂಗಳೂರಿಗೆ 7 ಬಸ್ ಗಳು ತೆರಳಿದ್ದವು. 8 ಗಂಟೆಯ ಬಳಿಕ ಪ್ರತಿಭಟನೆಯ ಕಾವು ಹೆಚ್ಚಾದಂತೆ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.
ಜನಜೀವನ ಅಸ್ತವ್ಯಸ್ತ:
ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತು. ಕೆಎಸ್ ಆರ್ ಟಿಸಿ, ಎಕ್ಸ್ ಪ್ರೆಸ್, ಸರ್ವಿಸ್ ಹಾಗೂ ಸಿಟಿ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಹೀಗಾಗಿ ಜನಸಂಚಾರ ತೀರಾ ವಿರಳವಾಗಿತ್ತು. ಇದರೊಂದಿಗೆ ಶಾಲಾ-ಕಾಲೇಜುಗಳಿಗೆ ಬಂದ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿನ್ನೆಯೇ ರಜೆಯನ್ನು ಘೋಷಿಸಿದ ಕಾರಣ ಇಂದು ಬಾಗಿಲು ತೆರೆಯಲಿಲ್ಲ.
ಉಡುಪಿ ನಗರದಲ್ಲಿ ಕೆಲವೊಂದು ಮಳಿಗೆ, ಅಂಗಡಿಗಳನ್ನು ಹೊರತುಪಡಿಸಿದರೆ ಬಹುತೇಕ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.
ಪ್ರಯಾಣಿಕರ ಪರದಾಟ:
ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಹೊರ ಊರಿನಿಂದ ಬಂದಿಳಿದ ಪ್ರಯಾಣಿಕರು ಉಡುಪಿ ಬಸ್ ನಿಲ್ದಾಣದಲ್ಲಿ ತೀರಾ ತೊಂದರೆ ಅನುಭವಿಸಿದರು. ಇವರಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಕುಂದಾಪುರದಲ್ಲಿ ಉತ್ತಮ ಬೆಂಬಲ:
ಕುಂದಾಪುರ ತಾಲೂಕಿನಲ್ಲಿ ಭಾರತ್ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕುಂದಾಪುರ ನಗರ ಸಂಪೂರ್ಣ ಬಂದ್ ಆಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂದಾಪುರ ನಗರದಲ್ಲಿ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿತ್ತು. ಖಾಸಗಿ ಹಾಗೂ ಸರಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತ್ತು. ಅಟೋಗಳು ರಸ್ತೆಗೆ ಇಳಿಯದೆ ಬೆಂಬಲ ಸೂಚಿಸಿದ್ದವು. ಎರಡು ಮೂರು ಹೊಟೇಲ್‌ಗಳು ಮಾತ್ರ ತೆರೆದಿದ್ದವು. ಪೇಟೆಯಲ್ಲಿ ಜನ ಸಂಚಾರ ಬಹಳ ವಿರಳವಾಗಿತ್ತು.ಗಂಗೊಳ್ಳಿಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರಿದ್ದವು. ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಜೆಸಿಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ತಲ್ಲೂರು, ಹೆಮ್ಮಾಡಿ, ಹಾಲಾಡಿ ಪೇಟೆಯಲ್ಲಿ ಬಂದ್‌ಗೆ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಗಿದೆ. ಎಲ್ಲ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದವು. ಸಿಐಟಿಯು ವತಿಯಿಂದ ಆಜ್ರಿಯ ಪೇಟೆಯಲ್ಲಿ ಪ್ರತಿಭಟನಾ ಜಾಥಾ ನಡೆ ಯಿತು. ನೇರಳಕಟ್ಟೆ, ಬೆಳ್ವೆ, ಗೋಳಿಯಂಗಡಿ ಭಾಗದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾರ್ಕಳದಲ್ಲಿ ಮಿಶ್ರ ಪ್ರತಿಕ್ರಿಯೆ:
ಕಾರ್ಕಳದಲ್ಲಿ ಮಂಗಳೂರು ಹಾಗೂ ಶಿವಮೊಗ್ಗ ಮಾರ್ಗವಾಗಿ ಬೆರಳಣಿಕೆಯ ಬಸ್‌ಗಳು ಓಡಾಟ ನಡೆಸಿದ್ದು, ಬಹುತೇಕ ಬಸ್‌ಗಳು ರಸ್ತೆಗೆ ಇಳಿಯದೆ ಬಂದ್ ಗೆ ಬೆಂಬಲ ಸೂಚಿಸಿದವು. ನಗರದಲ್ಲಿ ಅಂಗಡಿಮುಗ್ಗಟ್ಟುಗಳು ಬಹುತೇಕ ತೆರೆದಿರುವುದು ದೃಶ್ಯ ಕಂಡು ಬಂತು. ಮುಷ್ಕರದ ಪ್ರಯುಕ್ತ ಜಿಸಿಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಯ ವರು ಕಾರ್ಕಳ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಬಂಡಿ ಮಠದವರೆಗೆ ಪ್ರತಿಭಟನಾ ಮೆರಗಣಿಗೆ ನಡೆಸಲಾಯಿತು.
ಬೈಂದೂರಿನಲ್ಲಿ ಭಾಗಶಃ ಬಂದ್:
ಬೈಂದೂರಿನಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರೆ, ಶಾಲಾ-ಕಾಲೇಜುಗಳು ಮುಚ್ಚಿದ್ದವು. ಆದರೆ ಶೇ. 50ರಷ್ಟು ಅಂಗಡಿಗಳು ತೆರೆದಿದ್ದವು. ಮಧ್ಯಾಹ್ನದ ಬಳಿಕ ಹೆಚ್ಚಿನೆಲ್ಲಾ ಅಂಗಡಿಗಳು ಬಾಗಿಲು ತೆರೆದವು.
ಉಳಿದಂತೆ ಉಪ್ಪುಂದ, ತ್ರಾಸಿ, ಗಂಗೊಳ್ಳಿ, ಗುಜ್ಜಾಡಿ, ಹೆಮ್ಮಾಡಿ, ತಲ್ಲೂರು, ಸಿದ್ದಾಪುರ, ಅಂಪಾರು, ಅಮಾಸೆಬೈಲು, ಶಂಕರ ನಾರಾಯಣ, ಕೊಂಡಳ್ಳಿ, ಹಾಲಾಡಿ, ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ಕೋಣಿ, ಈಡೂರು, ವಂಡ್ಸೆ, ಆಲೂರು, ಬಸ್ರೂರುಗಳಲ್ಲೂ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. ಬಂದ್  ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಕೆಎಸ್‌ಆರ್‌ಪಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿಗಳನ್ನು ನಿಯೋಜಿಸಲಾಗಿತ್ತು.
ಸಿಟಿ ಬಸ್ ನಿಲ್ದಾಣದಲ್ಲಿ ಮಾತಿನ ಚಕಮಕಿ:
ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಅಣಿಯಾಗುತ್ತಿದ್ದಂತೆ ಕಾರ್ಮಿಕ ಸಂಘಟನೆ ಮುಖಂಡರು ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು. ಈ ವೇಳೆ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಬಸ್ ಚಾಲಕರು, ಆಟೋ ಚಾಲಕರು ಎಂದಿನಂತೆ ಕಾರ್ಯನಿರ್ವಹಿಸ್ತಿದ್ದಾರೆ. ದುಪ್ಪಟ್ಟು ಬಾಡಿಗೆ  ಪಡೆದು ಆಟೋ ಓಡಿಸುತ್ತಿದ್ದಾರೆ. ಅವರಿಗೆ ಮೊದಲು ಬಂದ್ ಗೆ ಸಹಕರಿಸುವಂತೆ ಹೇಳಿ. ಇಲ್ಲದಿದ್ದರೆ ನಾವು ಬಸ್ ಓಡಿಸುತ್ತೇವೆ ಎಂದು ವಾಗ್ವಾದಕ್ಕಿಳಿದರು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘ ಟನೆಯವರು ಆಟೋ ಚಾಲಕರ ಮನವೊಲಿಕೆ ಮಾಡಿದರು. ಇದರಿಂದ ಸಿಟಿ ಬಸ್ ನಿಲ್ದಾಣದಲ್ಲಿ ಶೇ. 80ರಷ್ಟು ಆಟೋ ಸಂಚಾರ ಸ್ಥಗಿತಗೊಂಡಿತು.
ಮುಷ್ಕರಕ್ಕೆ ಸಂಬಂಧಿಸಿ ಮಣಿಪಾಲ ಬಸ್ ನಿಲ್ದಾಣದಲ್ಲಿ ಬಸ್ ತಡೆದು ನಿಲ್ಲಿಸಿದ್ದಕ್ಕೆ ಪ್ರತಿಭಟನಾ ನಿರತರು ಮತ್ತು ಬಸ್ ಮಾಲಕರ ನಡುವೆ ಮಾತಿನ ಚಕಮಕಿ ನಡೆಯಿತು. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.