ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಇಂದು ಕರೆನೀಡಿದ್ದ ಸಾರ್ವತ್ರಿಕ ಮುಷ್ಕರದ ಪ್ರಯುಕ್ತ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಡುಪಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಅಜ್ಜರಕಾಡಿನ ಎಲ್ಐಸಿ ಕಚೇರಿಯ ಆವರಣದಿಂದ ಹೊರಟ ಕಾರ್ಮಿಕರ ಬೃಹತ್ ಮೆರವಣಿಗೆಯು ಜೋಡುಕಟ್ಟೆ, ಕೆ.ಎಂ.ಮಾರ್ಗ ಮೂಲಕ ಸರ್ವಿಸ್ ಬಸ್ ನಿಲ್ದಾಣದ ಮಹಾತ್ಮ ಗಾಂಧಿ ಪ್ರತಿಮೆ ಸುತ್ತುವರಿದು ಬಿಎಸ್ಎನ್ಎಲ್ ಕಛೇರಿ ರಸ್ತೆಯಾಗಿ ಕಾರ್ಪೋರೇಶನ್ ಬ್ಯಾಂಕಿನ ಕಚೇರಿ ಆವರಣದಲ್ಲಿ ಮುಕ್ತಾಯಗೊಂಡಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಬಂದ್ ನಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ವಿಷಾದ ವ್ಯಕ್ತಪಡಿಸುತ್ತೇವೆ. ಆದರೆ ಜನರು ಪ್ರತಿದಿನ ಅನುಭವಿಸುವ ತೊಂದರೆಗಾಗಿ ಈ ಹೋರಾಟ. ಅದನ್ನು ಜನರು ಅರ್ಥಮಾಡಿಕೊಂಡು, ಬಂದ್ ಗೆ ಸಹಕಾರ ನೀಡಬೇಕು. ಈ ಮುಷ್ಕರದ ಮೂಲಕ ಮಲ್ಪೆ ಬಂದರಿನಿಂದ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೂ ಆಗ್ರಹ ಪಡಿಸುತ್ತೇವೆ ಎಂದರು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಸಂಚಾಲಕ ಕೆ.ಶಂಕರ್, ಕೇಂದ್ರ ಸರಕಾರಕ್ಕೆ ಜನರ ಬೇಡಿಕೆ, ಮಹತ್ವ, ಸಮಸ್ಯೆಗಳ ಬಗ್ಗೆ ಅರಿವು ಮೂಡಿಲ್ಲ. ಅವರಿಗೆ ಅರಿವು ಮೂಡಿಸುವ ಕೆಲಸ ಈ ರೀತಿಯ ಹೋರಾಟದಿಂದ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಜೆಸಿಟಿಯು ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ, ಸಿಐಟಿಯು ಜಿಲ್ಲಾಧ್ಯಕ್ಷ ವಿಶ್ವನಾಥ್ ರೈ, ಎಐಟಿಯುಸಿಯ ಕೆ.ವಿ.ಭಟ್, ಐಎನ್ಟಿಯುಸಿಯ ಗಣೇಶ್ ಕೋಟ್ಯಾನ್, ಎಐಬಿಇಎಯ ರಾಮ್ ಮೋಹನ್, ಬಿಎಸ್ಸೆಎನ್ನೆಲ್ ನೌಕರರ ಯೂನಿಯನ್ನ ಶಶಿಧರ ಗೊಲ್ಲ, ಬಿಇಎಫ್ಐಯ ರವೀಂದ್ರ ಎ., ಎಐಐಇಎಯ ಪ್ರಭಾಕರ ಬಿ.ಕುಂದರ್, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಮೊದಲಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.