ಕೆಜಿಗೆ 29 ರೂ ಬೆಲೆಯ ‘ಭಾರತ್ ಅಕ್ಕಿ’ ಬಿಡುಗಡೆ: ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಚಾಲನೆ

ನವದೆಹಲಿ: ಆಹಾರ ಸಚಿವ ಪಿಯೂಷ್ ಗೋಯಲ್ ಇಂದು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ‘ಭಾರತ್ ಅಕ್ಕಿ’ಯನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.

ಕೇಂದ್ರ ಸರ್ಕಾರದ ‘ಭಾರತ್ ಅಕ್ಕಿ’ ವಾಹನಗಳಿಗೆ ಇಂದು ಚಾಲನೆ ದೊರೆಯಲಿದ್ದು, ಪ್ರತಿ ಕೆಜಿಗೆ 29 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ದೇಶಾದ್ಯಂತ ಎಲ್ಲ ಚಿಲ್ಲರೆ ಮಾರುಕಟ್ಟೆ ಅಂಗಡಿಗಳಲ್ಲಿ ಅಕ್ಕಿ ದೊರೆಯಲಿದ್ದು, ಆನ್‌ಲೈನ್‌ನಲ್ಲಿಯೂ ಅಕ್ಕಿ ಖರೀದಿ ಮಾಡಬಹುದಾಗಿದೆ.

ಭಾರತ್ ಅಕ್ಕಿ ಯೋಜನೆಯಡಿ ಮಾರಾಟ ಮಾಡಲಾಗುತ್ತಿದ್ದು, 5 ಕೆಜಿ ಹಾಗೂ 10 ಕೆಜಿ ಬ್ಯಾಗ್‌ಗಳಲ್ಲಿ ಅಕ್ಕಿ ಪ್ಯಾಕಿಂಗ್ ಮಾಡಲಾಗಿದೆ. ಇಂದು ಸಂಜೆಯಿಂದ ಬೆಂಗಳೂರಿನಲ್ಲಿ ಅಕ್ಕಿ ಲಭ್ಯವಾಗಲಿದ್ದು, ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಅಕ್ಕಿ ಲಭ್ಯವಾಗಲಿದೆ.

ರಿಲಯನ್ಸ್, ಫ್ಲಿಪ್‌ಕಾರ್ಟ್, ಬಿಗ್‌ಬಾಸ್ಕೆಟ್ ಹಾಗೂ ಇನ್ನಿತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಕ್ಕಿ ಖರೀದಿ ಮಾಡಬಹುದಾಗಿದೆ. ದಿನಸಿ ಅಂಗಡಿಗಳಲ್ಲಿಯೂ ಕೆಲವೇ ದಿನಗಳಲ್ಲಿ ಅಕ್ಕಿ ಲಭ್ಯವಾಗಲಿದೆ.

ಅಕ್ಕಿ ಬೆಲೆ ಕಳೆದ ಒಂದು ವರ್ಷಗಳಲ್ಲಿ ಶೇ. 15 ರಷ್ಟು ಏರಿಕೆ ಕಂಡಿದ್ದು ಗ್ರಾಹಕರಿಗೆ ಬೆಲೆ ಏರಿಕೆಗೆ ಪರಿಹಾರ ನೀಡಲು ಅಕ್ಕಿಯನ್ನು ಸಬ್ಸಿಡಿ ದರದಲ್ಲಿ ಬಿಡುಗಡೆ ಮಾಡಲಾಗಿದೆ.

27.50 ರೂ ಪ್ರತಿ ಕೆಜಿ ಭಾರತ್ ಅಟಾ ಮತ್ತು 60 ರೂ ಪ್ರತಿ ಕೆಜಿ ಭಾರತ್ ಚನಾ ಗೆ ದೊರೆತ ಪ್ರತಿಕ್ರಿಯೆ ಉತ್ತಮವಾಗಿದ್ದು ಭಾರತ್ ಅಕ್ಕಿಗೂ ಪ್ರತಿಕ್ರಿಯೆ ದೊರೆಯಲಿದೆ ಎನ್ನಲಾಗಿದೆ.