ಪ್ರಧಾನಿ ಮೋದಿ ಜಿ-20 ಶೃಂಗಸಭೆಯಲ್ಲಿ ಆಸನದ ಮುಂದೆ ‘ಭಾರತ’ ಕಾರ್ಡ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಎರಡು ದಿನಗಳ ಜಿ-20 ಶೃಂಗಸಭೆ ಆರಂಭವಾಗಿದೆ . ದೆಹಲಿಯ ‘ಭಾರತ್’ ಮಂಟಪಂನಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಆಸನದ ಮುಂದೆ ‘ಭಾರತ’ ಹೆಸರಿನ ಫಲಕ ಪ್ರರ್ದಶಿಸಲಾಗಿದೆ
ಮಹತ್ವದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ’ವನ್ನು ಪ್ರತಿನಿಧಿಸುವ ನಾಯಕ ಎಂದು ಗುರುತಿಸಲಾಗಿದೆ. ಪ್ರಧಾನಿ ಮೋದಿ ಆಸನದ ಮುಂದೆ ‘ಭಾರತ’ ಫಲಕವನ್ನು ಇರಿಸಲಾಗಿದೆ.

ಈ ಶೃಂಗಸಭೆ ನಿಮಿತ್ತ ರಾಷ್ಟ್ರಪತಿಗಳು ಔತಣಕೂಟವನ್ನು ಏರ್ಪಡಿಸಿದ್ದಾರೆ. ಇದರ ಆಮಂತ್ರಣ ಪತ್ರಿಕೆಯಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದ್ದ ‘ಪ್ರೆಸಿಡೆಂಟ್​ ಆಫ್​ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್​ ಆಫ್​ ಭಾರತ’ ಎಂದು ಮುದ್ರಣ ಮಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು. ಇದೇ ಹೆಸರಿನ ಔತಣಕೂಟದ ಆಹ್ವಾನ ಪತ್ರವನ್ನು ಜಿ20 ಪ್ರತಿನಿಧಿಗಳು ಮತ್ತು ಇತರ ಅತಿಥಿಗಳಿಗೆ ನೀಡಲಾಗಿದೆ.ಜಿ-20 ಅಧ್ಯಕ್ಷತೆವನ್ನು ಭಾರತ ವಹಿಸಿದ್ದು, ದೆಹಲಿಯ ‘ಭಾರತ್’ ಮಂಟಪದಲ್ಲಿ ವಾರ್ಷಿಕ ಶೃಂಗಸಭೆ ನಡೆಯುತ್ತಿದೆ. ಈ ಸಭೆಯನ್ನು ಉದ್ದೇಶಿಸಿ ಆರಂಭಿಕ ಮಾತುಗಳನ್ನಾಡಿದ ಪ್ರಧಾನಿ ಮೋದಿ ಅವರ ಮುಂಭಾಗದಲ್ಲಿ ‘ಭಾರತ’ ಹೆಸರಿನ ಪ್ರದರ್ಶನ ಮಾಡಲಾಗಿದೆ. ಸಂವಿಧಾನದಲ್ಲಿ ದೇಶಕ್ಕೆ ‘ಇಂಡಿಯಾ’ದೊಂದಿಗೆ ಬಳಸಲಾದ ‘ಭಾರತ’ ಎಂಬ ಹೆಸರನ್ನು ಸರ್ಕಾರವು ಹಲವಾರು ಅಧಿಕೃತ ಜಿ20 ದಾಖಲೆಗಳಲ್ಲಿ ಬಳಸಿದೆ. ಇದು ಪ್ರಜ್ಞಾಪೂರ್ವಕ ನಿರ್ಧಾರ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಾಚೀನ ಹಿಂದಿ ಹೆಸರಿನ ಸಾಂಸ್ಕೃತಿಕ ಹಿನ್ನೆಲೆಯನ್ನು ಉಲ್ಲೇಖಿಸಿ ಆಡಳಿತಾರೂಢ ಬಿಜೆಪಿ ನಾಯಕರು ‘ಭಾರತ’ ಎಂಬ ಹೆಸರು ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಮತ್ತೆ ಕೆಲ ನಾಯಕರು ‘ಇಂಡಿಯಾ’ ಎಂಬ ಇಂಗ್ಲಿಷ್ ಹೆಸರು. ಇದು ವಸಾಹತುಶಾಹಿ ಪರಂಪರೆಯನ್ನು ಬಿಂಬಿಸುತ್ತದೆ ಎಂದು ಪ್ರತಿಪಾದಿಸಿದ್ದರು. ಆದಾಗ್ಯೂ, ಸಂವಿಧಾನವು ದೇಶಕ್ಕೆ ಇಂಡಿಯಾ’ ಹಾಗೂ ‘ಭಾರತ’ ಪದಗಳಲ್ಲಿ ಎರಡೂ ಹೆಸರುಗಳನ್ನು ನೀಡಿದೆ. ಹೀಗಾಗಿ ಬಿಜೆಪಿಯು ತನ್ನ ನಾಯಕರಿಗೆ ‘ಭಾರತ v/s ಇಂಡಿಯಾ’ ಚರ್ಚೆಯಲ್ಲಿ ತೊಡದಂತೆ ಸೂಚಿಸಿದೆ.

ಮತ್ತೊಂದೆಡೆ, ಕಾಂಗ್ರೆಸ್​ ಸಂಸದ ಶಶಿ ತರೂರ್,​ ದೇಶಕ್ಕಿರುವ ಎರಡು ಅಧಿಕೃತ ಹೆಸರುಗಳಲ್ಲಿ ಒಂದಾಗಿರುವ ಇಂಡಿಯಾವನ್ನು ‘ಭಾರತ್’ ಎಂದು ಕರೆಯಲು ಯಾವುದೇ ಸಾಂವಿಧಾನಿಕ ಆಕ್ಷೇಪಣೆ ಇಲ್ಲ. ಶತಮಾನಗಳಿಂದ ಅಸಂಖ್ಯಾತ ಬ್ರಾಂಡ್ ಮೌಲ್ಯವನ್ನು ಹೊಂದಿರುವ ‘ಇಂಡಿಯಾ’ ಪದವನ್ನು ಸಂಪೂರ್ಣವಾಗಿ ತ್ಯಜಿಸುವಷ್ಟು ಮೂರ್ಖತನವನ್ನು ಸರ್ಕಾರವು ತೋರುವುದಿಲ್ಲ ಎಂದು ಭಾವಿಸುತ್ತೇನೆ. ಎರಡೂ ಪದಗಳನ್ನು ಬಳಸುವುದನ್ನು ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರು.

ಕೇಂದ್ರ ಸರ್ಕಾರವು ದೇಶದ ಎರಡು ಅಧಿಕೃತ ಹೆಸರುಗಳಾದ ‘ಇಂಡಿಯಾ’ ಹಾಗೂ ‘ಭಾರತ’ ಪದಗಳಲ್ಲಿ ‘ಇಂಡಿಯಾ’ವನ್ನು ಕೈಬಿಡಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಅಲ್ಲದೇ, ಪ್ರತಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂದು ಹೆಸರಿಟ್ಟಿರುವ ಕಾರಣ ಸರ್ಕಾರ ದೇಶಕ್ಕೆ ‘ಭಾರತ’ ಎಂದು ಮರುನಾಮಕರಣ ಮಾಡಲು ಮುಂದಾಗಿದೆ ಎಂಬ ಹೇಳಿಕೆಗಳು ಸಹ ಕೇಳಿ ಬಂದಿದ್ದವು. ಇದು ರಾಜಕೀಯ ಚರ್ಚೆಗೆ ಕಾರಣವಾಗಿತ್ತು.