ಜೈಪುರ್(ರಾಜಸ್ಥಾನ) : ಇತ್ತೀಚೆಗೆ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ.ಈಗಾಗಲೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಭಜನ್ ಲಾಲ್ ಶರ್ಮಾ ಅವರನ್ನು ಆಯ್ಕೆ ಮಾಡಿದ್ದು, ಡಿ.15ರಂದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಡಿಸೆಂಬರ್ 15ರಂದು ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ
1 ಲಕ್ಷಕ್ಕೂ ಅಧಿಕ ಜನ ಭಾಗಿಯಾಗುವ ನಿರೀಕ್ಷೆ : ಪದಗ್ರಹಣ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನ ಭಾಗಿಯಾಗುವ ನಿರೀಕ್ಷೆ ಇದೆ. ಈ ಬಗ್ಗೆ ಬಿಜೆಪಿ ಅಧಿಕೃತವಾಗಿ ಮಾಹಿತಿ ನೀಡದಿದ್ದರೂ ಭರದ ಸಿದ್ಧತೆ ನಡೆಸಿದೆ. ರಾಜ್ಯದ ವಿವಿಧೆಡೆಯಿಂದ ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಜನರನ್ನು ಕರೆತರಲು ನೂತನ ಶಾಸಕರಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಪ್ರತಿ ಜಿಲ್ಲಾಕೇಂದ್ರದಿಂದ ಸಾಕಷ್ಟು ಜನರನ್ನು ಕರೆ ತರಲು ಜಿಲ್ಲಾಧ್ಯಕ್ಷರಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ರಾಮ್ನಿವಾಸ್ ಭಾಗ್ನ ಅಲ್ಬರ್ಟ್ ಹಾಲ್ನಲ್ಲಿ ಶುಕ್ರವಾರ ಮಧ್ಯಾಹ್ನ 12.15ಕ್ಕೆ ಪದಗ್ರಹಣ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಹಲವು ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ರಾಜ್ಯದ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಪದಗ್ರಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಲೋಕಸಭೆ ಚುನಾವಣೆಗೂ ಸಿದ್ಧತೆ : ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ಬಳಿಕ ಇದೀಗ ಮುಂಬರುವ ಲೋಕಸಭೆ ಚುನಾವಣೆಗೂ ಸಜ್ಜಾಗುತ್ತಿದೆ. ಈ ಸಂಬಂಧ ಪದಗ್ರಹಣ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಈ ಮೂಲಕ ರಾಜ್ಯದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಮಲ ಅರಳಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಅಲ್ಬರ್ಟ್ ಹಾಲ್ನಲ್ಲಿ ಭರದ ಸಿದ್ಧತೆ : ಪದಗ್ರಹಣ ಸಮಾರಂಭದ ಹಿನ್ನೆಲೆ ಅಲ್ಬರ್ಟ್ ಹಾಲ್ನಲ್ಲಿ ಭರದ ಸಿದ್ಧತೆಯನ್ನು ನಡೆಸಲಾಗಿದೆ. ಈಗಾಗಲೇ ಸಮಾರಂಭದ ಸಿದ್ಧತೆಗಳು ಪೂರ್ಣಗೊಂಡಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಿಜೆಪಿ ಧ್ವಜಗಳು ರಾರಾಜಿಸುತ್ತಿವೆ. ಅಲ್ಬರ್ಟ್ ಹಾಲ್ ಸಂಪೂರ್ಣ ಕೆಸರೀಮಯವಾಗಿದೆ. ಸ್ಥಳದಲ್ಲಿ ಗಣ್ಯರಿಗೆ ಮತ್ತು ಆಹ್ವಾನಿತರಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.