ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆ: ಜೈಪುರದ ಮಹಾರಾಣಿಗೆ ಉಪಮುಖ್ಯಮಂತ್ರಿ ಪಟ್ಟ

ಜೈಪುರ: ಭಾರತೀಯ ಜನತಾ ಪಕ್ಷವು ಮಂಗಳವಾರ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದ ಭಜನ್ ಲಾಲ್ ಶರ್ಮಾ ಅವರನ್ನು ಆಯ್ಕೆ ಮಾಡಿದೆ. ಭಜನ್ ಲಾಲ್ ಶರ್ಮಾ ಅವರನ್ನು ನೂತನ ಸಿಎಂ ಆಗಿ ನೇಮಕ ಮಾಡುವುದರ ಜೊತೆಗೆ ಜೈಪುರದ ಮಹಾರಾಣಿ ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಬೈರ್ವಾ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಗಳನ್ನಾಗಿ ಘೋಷಿಸಿದೆ.

ಭಜನ್‌ಲಾಲ್ ಶರ್ಮಾ ಮೂಲತಃ ಭರತ್‌ಪುರದವರು. ದೀರ್ಘಕಾಲದಿಂದ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಜೈಪುರದ ಸಂಗನೇರ್‌ನಿಂದ ಬಿಜೆಪಿ ಅವರನ್ನು ಮೊದಲ ಬಾರಿಗೆ ಕಣಕ್ಕಿಳಿಸಿತ್ತು. ಹಾಲಿ ಶಾಸಕ ಅಶೋಕ್ ಲಾಹೋಟಿ ಅವರ ಟಿಕೆಟ್ ರದ್ದುಪಡಿಸುವ ಮೂಲಕ ಪಕ್ಷವು ಭಜನ್‌ಲಾಲ್ ಅವರನ್ನು ಅಭ್ಯರ್ಥಿಯನ್ನಾಗಿಸಿತ್ತು. ಭಜನಲಾಲ್ ಶರ್ಮಾ ಅವರು ಕಾಂಗ್ರೆಸ್‌ನ ಪುಷ್ಪೇಂದ್ರ ಭಾರದ್ವಾಜ್ ಅವರನ್ನು 48,081 ಮತಗಳಿಂದ ಸೋಲಿಸಿದ್ದಾರೆ.

ಜೈಪುರದ ಕೊನೆಯ ಆಡಳಿತ ಮಹಾರಾಜ ಮಾನ್ ಸಿಂಗ್ II ಇವರ ಮೊಮ್ಮಗಳಾದ ದಿಯಾ ಕುಮಾರಿ 2013 ರಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರಾದರು. ದಿಯಾ ಕುಮಾರಿ ಅವರನ್ನು ಉಪಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ.