ಬೆಂಗಳೂರು: ಅರಮನೆ ರಸ್ತೆಯ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ರಾಜ್ಯ ಮಟ್ಟದ ಯುವ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಈಗಿನ ಪ್ರಗತಿ ನೋಡಿದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಈಗಾಗಲೇ ಪೂರ್ಣಗೊಂಡಿದೆ ಮತ್ತು ಅಮೃತಕಾಲ ಪ್ರಾರಂಭವಾಗಿದೆ ಎನ್ನುವುದು ಕಾಣುತ್ತದೆ. ಮತ್ತಷ್ಟು ಸಾಧನೆ ಮಾಡುವವರ ಮೂಲಕ ಯುವಕರು 2047ರ ವರ್ಷ ಬರುವ ವೇಳೆಗೆ ಈ ದೇಶವನ್ನು ಶತಮಾನೋತ್ಸವನ್ನು ಇನ್ನಷ್ಟು ಸಂಭ್ರಮಿಸುವ ರೀತಿಯಲ್ಲಿ ಕೊಂಡೊಯ್ಯಬೇಕಾಗಿದೆ. ಅಮೃತಕಾಲದಿಂದ ಶತಮಾನೋತ್ಸವಕ್ಕೆ ದೇಶವನ್ನು ಮುನ್ನಡೆಸಲು ಯುವಕರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಭಾರತವು ಸಾಕಷ್ಟು ಸಾಮರ್ಥ್ಯ ಹೊಂದಿರುವ ದೇಶವಾಗಿದೆ. ಈಗ ಜಿಡಿಪಿಯಲ್ಲಿ 5ನೇಯ ಸ್ಥಾನದಲ್ಲಿದ್ದೇವೆ. ಕೋವಿಡ್ ಸಾಂಕ್ರಾಮಿಕ ರೋಗ ಬಂದಿರದಿದ್ದರೆ, ನಾವು ವಿಶ್ವದ 2ನೇ ಅಥವಾ 3ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುತ್ತಿದ್ದೆವು ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನದ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.ಭಾರತದ ಈಗಿನ ಪ್ರಗತಿ ನೋಡಿದರೆ ಅಮೃತಕಾಲ ಪ್ರಾರಂಭವಾಗಿದೆ ಎಂದು ಕಾಣುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ರಾಜ್ಯ ಯುವ ಉತ್ಸವದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ರಾಷ್ಟ್ರೀಯ ಏಕೀಕರಣ ಮತ್ತು ಪಂಚಪ್ರಾಣ ಪ್ರತಿಜ್ಞೆ ಬೋಧಿಸಿ ಮಾತನಾಡಿದ, ಯುವ ಸಬಲೀಕರಣ ಮತ್ತು ಕ್ರೀಡಾ ಆಯುಕ್ತ ಎನ್.ಶಶಿಕುಮಾರ್ ತಮ್ಮ ಕಾಲೇಜು ದಿನಗಳನ್ನು ಸ್ಮರಿಸಿಕೊಂಡು ಈ ಯುವಜನೋತ್ಸವವು ಯುವಜನರಲ್ಲಿ ಅಡಗಿರುವ ಪ್ರತಿಭೆ ಗುರುತಿಸುತ್ತಿದೆ ಎಂದರು. ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಲಿಂಗರಾಜ್ ಗಾಂಧಿ ಮಾತನಾಡಿ, ರಾಷ್ಟ್ರೀಯ ನಿರ್ಮಾಣ ಚಟುವಟಿಕೆಗಳಲ್ಲಿ ನೆಹರು ಯುವ ಕೇಂದ್ರ ಸಂಘಟನೆಯ ಪಾತ್ರವನ್ನು ಶ್ಲಾಘಿಸಿದರು.
ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್ ಅತಿಥಿಗಳನ್ನು ಸ್ವಾಗತಿಸಿ ಸಭೆಯ ಮುಖ್ಯ ಭಾಷಣ ಮಾಡಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ನಾಗವೇಣಿ, ಚಿನ್ನಪ್ಪ, ಶೋಭಾ, ನರಸಿಂಹ ಮೂರ್ತಿ, ಬಾಲಾಜಿ ಮತ್ತು ಮಾನವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕದ 31 ಜಿಲ್ಲೆಗಳಿಂದ 527 ಯುವಕ ಯುವತಿಯರು ಯುವ ಉತ್ಸವದಲ್ಲಿ ಭಾಗವಹಿಸಿದ್ದರು. ಜಾನಪದ ನೃತ್ಯ, ಕವಿತೆ ಬರೆಯುವ ಸ್ಪರ್ಧೆ, ಚಿತ್ರಕಲೆ, ಮೊಬೈಲ್ ಛಾಯಾಗ್ರಹಣ ಮತ್ತು ರಾಷ್ಟ್ರ ನಿರ್ಮಾಣ ಕುರಿತು ಘೋಷಣೆಗಳ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಉತ್ಸವದಲ್ಲಿ ಏರ್ಪಡಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್, ಭಾರತವು ಹಲವಾರು ಜಾತಿ ಮತ್ತು ಧರ್ಮಗಳನ್ನು ಹೊಂದಿರುವ ದೇಶವಾಗಿದೆ. ಪ್ರಪಂಚದಾದ್ಯಂತ ನಮ್ಮ ದೇಶದ ಸಮಗ್ರತೆ ಎಲ್ಲಿಯೂ ಕಾಣದಿರಬಹುದು. ಹೆಚ್ಚಿನ ದೇಶಗಳು ಒಂದು ಭಾಷೆ ಮತ್ತು ಒಂದು ಧರ್ಮವನ್ನು ಹೊಂದಿವೆ. ಆದರೆ, ಭಾರತವು ಹಲವಾರು ಜಾತಿ ಮತ್ತು ಧರ್ಮಗಳನ್ನು ಹೊಂದಿ ನಾವೆಲ್ಲರೂ ಭಾರತೀಯರು ಎಂದು ಎಲ್ಲ ವೈವಿಧ್ಯತೆಗಳೊಂದಿಗೆ ಮುನ್ನಡೆಯುತ್ತಿದೆ. ಯುವಕರು ಸಹ ದೇಶದ ಸಮಗ್ರ ಪ್ರಗತಿಯನ್ನು ಮುಂದೆ ಕೊಂಡಯ್ಯಬೇಕಿದೆ. ಈ ಹಿನ್ನೆಲೆಯಲ್ಲಿ ತಮ್ಮಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ರಾಜ್ಯ ಯುವಜನೋತ್ಸವ ಉತ್ತಮ ಅವಕಾಶವಾಗಿದೆ ಎಂದು ಅಭಿಪ್ರಾಯಪಟ್ಟರು.