ಕಾಪು: ಕೋಟಿ ಮೌಲ್ಯದ ಆಸ್ತಿ ಕಬಳಿಕೆ; ತುತ್ತುಕೊಟ್ಟು ಸಾಕಿದ ಅಜ್ಜಿಗೆ ದ್ರೋಹ ಬಗೆದ ಮೊಮ್ಮಗಳು

ಉಡುಪಿ: ತುತ್ತು ಕೊಟ್ಟು ಸಾಕಿ ಸಲಹಿದ ಅಜ್ಜಿಗೆ ಮೊಮ್ಮಗಳೊಬ್ಬಳು ದ್ರೋಹ ಎಸಗಿದ ಘಟನೆ ಕಾಪು ತಾಲ್ಲೂಕಿನ ಸಾಂತೂರಿನಲ್ಲಿ ನಡೆದಿದೆ.

ಎರಡು ಕೋಟಿಯಷ್ಟು ಬೆಲೆಬಾಳುವ ಜಮೀನು ಹಾಗೂ ಮನೆಯನ್ನು ಸರ್ಕಾರಿ ಅಧಿಕಾರಿಗಳ ಸಹಕಾರದೊಂದಿಗೆ ತನ್ನ ಹೆಸರಿಗೆ ಬರೆಸಿಕೊಂಡು, ಪ್ರೀತಿ ಮಮತೆಯಿಂದ ಸಾಕಿದ ಅಜ್ಜಿಯನ್ನೇ ಬೀದಿ ಪಾಲು ಮಾಡಿದ್ದಾಳೆ.

ಸಾಂತೂರಿನ ರೋಶ್ನಿ ಎಂಬಾಕೆಯೇ ಅಜ್ಜಿಯ ಬೆನ್ನಿಗೆ ಚೂರಿ ಹಾಕಿದ ವಂಚಕಿ ಮೊಮ್ಮಗಳು. ಮೊಮ್ಮಗಳು ಮಾಡಿದ ನಂಬಿಕೆ ದ್ರೋಹದಿಂದ ಅಜ್ಜಿ ಸೆಲೆಸ್ಟಿನ್ (84) ಹಾಸಿಗೆ ಹಿಡಿದಿದ್ದಾರೆ.

ರೋಶ್ನಿ ಮಾಡಿದ ದ್ರೋಹದಿಂದ ಅಜ್ಜಿಯ ನಾಲ್ಕು ಮಕ್ಕಳ ಕುಟುಂಬ ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದೆ. ನಾಲ್ಕು ಮಕ್ಕಳ ಪೈಕಿ ರೋನಾಲ್ಡ್ ಎಂಬುವವರ ಮಗಳೇ ಈ ರೋಶ್ನಿ. ತಾಯಿಯ ಆಸ್ತಿಯನ್ನು ನನಗೂ ಅರಿವಿಗೆ ಬಾರದಂತೆ ನನ್ನ ಪುತ್ರಿ ತನ್ನ ಹೆಸರಿಗೆ ಬರೆದುಕೊಂಡಿದ್ದಾಳೆ ಎಂದು ರೊನಾಲ್ಡ್ ದೂರಿದ್ದಾರೆ.

ಅಜ್ಜಿಗೆ ದೋಖಾ ಮಾಡಿದ್ದು ಹೇಗೆ.?
ಕೇಂದ್ರ ಸರ್ಕಾರದಿಂದ ಕೃಷಿ ಯೋಜನೆಯಡಿ ಸಾಲ ಬಂದಿದೆ ಎಂದು ಹೇಳಿ ಅಜ್ಜಿ ಮತ್ತು ತಂದೆಯನ್ನು ಮೂಲ್ಕಿಯ ಸಬ್ ರಿಜಿಸ್ಟಾರ್ ಕಚೇರಿಗೆ ಕರೆದೊಯ್ದ ರೋಶ್ನಿ, ಅನಕ್ಷರಸ್ಥ ಅಜ್ಜಿಯ ಹೆಬ್ಬೆಟ್ಟು ಹಾಗೂ ಅಪ್ಪನಿಂದ ಸಹಿ ಹಾಕಿಸಿಕೊಂಡಿದ್ದಾಳೆ.

ಮೂರು ತಿಂಗಳ ಬಳಿಕ ತಂದೆ ಕರೆದೊಯ್ದು ಮತ್ತೆ ಸಹಿ ಪಡೆದಿದ್ದಾಳೆ. ಆ ಮೂಲಕ ಸೆಲಿಸ್ಟಿನ್ ಕೋಟಿ ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾಳೆ. ಈ ವಂಚನೆಯಲ್ಲಿ ಸಬ್ ರಿಜಿಸ್ಟಾರ್ ಕಚೇರಿ ಹಾಗೂ ಭೂ ಕಂದಾಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಶಂಕೆ ಇದೆ ಎಂದು ಉಡುಪಿ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನುಭಾಗ್ ತಿಳಿಸಿದ್ದಾರೆ.

ಇತ್ತೀಚೆಗೆ ಕೃಷಿ ಸಮೀಕ್ಷೆ ನಡೆಸುವಾಗ ಜಮೀನು ವರ್ಗಾವಣೆ ಆಗಿರುವ ವಿಚಾರ ಬೆಳಕಿಗೆ ಬಂದಿದ್ದು, ಇದರಿಂದ ಸೆಲೆಸ್ಟಿನ್ ಅವರ ನಾಲ್ಕು ಮಕ್ಕಳು ಶಾಕ್ ಗೆ ಒಳಗಾಗಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಗಳ ಬೇಜಾವಬ್ದಾರಿ ಎದ್ದು ಕಾಣುತ್ತಿದೆ. ಇದೀಗ ಪ್ರತಿಷ್ಠಾನ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಈ ಹಿರಿಯ ಜೀವಕ್ಕೆ ಪ್ರತಿಷ್ಠಾನ ಕಾನೂನು ನೆರವು ನೀಡಲಿದೆ ಎಂದು ಅವರು ಭರವಸೆ ನೀಡಿದರು.