ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತವು ತನ್ನ ಸಾರ್ವಕಾಲಿಕ ಅತ್ಯುತ್ತಮ ಪ್ರದರ್ಶನವನ್ನು ತೋರಿಸುತ್ತಿದ್ದು, ಆಗಸ್ಟ್ 5 ರವರೆಗೆ ಚಿನ್ನ, ಬೆಳ್ಳಿ ಮತ್ತು ಕಂಚು ಸೇರಿದಂತೆ ಒಟ್ಟು 40 ಪದಕಗಳನ್ನು ಗಳಿಸಿದೆ. ಮೊನ್ನೆವರೆಗೆ ಭಾರ ಎತ್ತುವ ಸ್ಪರ್ಧೆಯಲ್ಲಿ ಪದಕಗಳ ಸುರಿಮಳೆಗೈದ ಭಾರತೀಯ ಪಟುಗಳು, ಈಗ ಕುಸ್ತಿಯಲ್ಲಿಯೂ ಚಿನ್ನದ ಬೇಟೆಯನ್ನು ನಿರಂತರವಾಗಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಕುಸ್ತಿಪಟುಗಳಾದ ರವಿಕುಮಾರ್ ದಹಿಯಾ, ವಿನೇಶ್ ಫೋಗಟ್ ಮತ್ತು ನವೀನ್ ಆಯಾ ವಿಭಾಗಗಳಲ್ಲಿ ಹ್ಯಾಟ್ರಿಕ್ ಚಿನ್ನದ ಪದಕಗಳೊಂದಿಗೆ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸಿದರು. ಭಾರತದ ಸ್ಟಾರ್ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 3-5ರಲ್ಲಿ ಚಿನ್ನದ ಪದಕ ಗೆದ್ದರು. ಭಾರತದ ಮತ್ತೋರ್ವ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಸೋನಾಲ್ಬೆನ್ ಮನುಭಾಯ್ ಪಟೇಲ್ ಮಹಿಳೆಯರ ಸಿಂಗಲ್ಸ್ 3-5 ನಲ್ಲಿ ಕಂಚಿನ ಪದಕ ಪಡೆದರು.
ಇಂದು ಭಾರತದ ನಾಲ್ವರು ಬಾಕ್ಸರ್ಗಳು ಚಿನ್ನಕ್ಕಾಗಿ ಹೋರಾಡಲಿರುವುದರಿಂದ ಬಾಕ್ಸಿಂಗ್ನಲ್ಲಿ ನಾಲ್ಕು ಪದಕಗಳನ್ನು ಖಾತೆಗೆ ಖಚಿತಪಡಿಸಿದ್ದಾರೆ. ಅಮಿತ್ ಪಂಘಲ್, ನಿತು ಘಂಘಾಸ್, ನಿಖತ್ ಜರೀನ್ ಮತ್ತು ಸಾಗರ್ ಅಹ್ಲಾವತ್ ತಮ್ಮ ತಮ್ಮ ಈವೆಂಟ್ಗಳಲ್ಲಿ ಫೈನಲ್ಗೆ ತಲುಪಿದ್ದಾರೆ. ಭಾರತ ಇದುವರೆಗೆ 40 ಪದಕಗಳನ್ನು ಗೆದ್ದಿದ್ದು, ಇದರಲ್ಲಿ 13 ಚಿನ್ನ, 11 ಬೆಳ್ಳಿ ಮತ್ತು 16 ಕಂಚಿನ ಪದಕಗಳು ಸೇರಿವೆ.