ಎವರೆಸ್ಟ್ ಮ್ಯಾರಥಾನ್‌ನಲ್ಲಿ ದಾಖಲೆ ನಿರ್ಮಿಸಿದ ಬೆಂಗಳೂರಿನ ಮಹಿಳೆ ಅಶ್ವಿನಿ ಭಟ್

ಬೆಂಗಳೂರು: ಬೆಂಗಳೂರಿನ 36 ವರ್ಷದ ಅಶ್ವಿನಿ ಗಣಪತಿ ಭಟ್, ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ತನ್ನ ಚಾರಣವನ್ನು ಸ್ವತಃ ಪೂರ್ಣಗೊಳಿಸಿದ್ದು ಮಾತ್ರವಲ್ಲದೆ, ಗಮ್ಯಸ್ಥಾನಕ್ಕೆ ತಲುಪಲು 60 ಕಿ.ಮೀ ಮ್ಯಾರಥಾನ್ ಓಟವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 15 ಓಟಗಾರರು ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದು, ಅಶ್ವಿನಿ 9 ನೇ ಸ್ಥಾನ ಪಡೆದಿದ್ದಾರೆ ಮತ್ತು ವಿಶ್ವಾದ್ಯಂತ ಮಹಿಳೆಯರಲ್ಲಿ ನಾಲ್ಕನೇ ಅತ್ಯುತ್ತಮ ದಾಖಲೆಯನ್ನು ಮೇ 29 ರಂದು ಸ್ಥಾಪಿಸಿದ್ದಾರೆ.

“ಈ ವರ್ಷ ಮ್ಯಾರಥಾನ್‌ನಲ್ಲಿ ಓಡಿದ ಏಕೈಕ ಮಹಿಳೆ ನಾನು. ಇದು ನಾನು ಬಯಸಿದ ಫಲಿತಾಂಶವಾಗಿರಲಿಲ್ಲ, ಆದರೆ ಯಾವುದೇ ವೈದ್ಯಕೀಯ ಸಮಸ್ಯೆಗಳನ್ನು ಎದುರಿಸದೆ ಪೂರ್ಣಗೊಳಿಸಿರುವ ಬಗ್ಗೆ ಸಂತೋಷವಿದೆ. ಮ್ಯಾರಥಾನ್‌ನಲ್ಲಿ ಭಾರತೀಯರೊಬ್ಬರ ದಾಖಲೆ ಇದೆಂದು ತಿಳಿದು ನನಗೆ ಆನಂದವಾಯಿತು” ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಅಶ್ವಿನಿ ತಿಳಿಸಿದ್ದಾರೆ.

ತನ್ನ ಕಾರ್ಪೋರೇಟ್ ಉದ್ಯೋಗವನ್ನು ತ್ಯಜಿಸಿದ ಬಳಿಕ ಶಿಸ್ತಿನ ಫಿಟ್ನೆಸ್ ದಿನಚರಿಯನ್ನು ಅಶ್ವಿನಿ ಹೊಂದಿದ್ದಾರೆ. 2018 ರಲ್ಲಿ ತನ್ನ ಉದ್ಯೋಗವನ್ನು ತ್ಯಜಿಸಿ ಅಥ್ಲೆಟಿಕ್ ಓಟವನ್ನು ಕೈಗೆತ್ತಿಕೊಂಡಿರುವ ಅಶ್ವಿನಿ ವಾರಕ್ಕೆ ಸುಮಾರು 80-100 ಕಿಮೀ ಓಡುತ್ತಾರೆ. ಮೊದಲಿಗೆ 10 ಕಿ.ಮೀ ಸರ್ಕಿಟ್ ನಿಂದ ನಿಧಾನವಾಗಿ ಪ್ರಾರಂಭಿಸಿ ಈಗ 42 ಕಿ.ಮೀ ಅಲ್ಟ್ರಾ ಮ್ಯಾರಥಾನ್ ಓಡುವಲ್ಲಿ ಅಶ್ವಿನಿ ಸಫಲರಾಗಿದ್ದಾರೆ.

ನಿತ್ಯವೂ 10 ಕಿ.ಮೀ ಓಡುವ ಅಶ್ವಿನಿ, ಹಿಮಾಲಯದ ಬಹುತೇಕ ಗಿರಿಗಳನ್ನು ಏರಿದ್ದಾರೆ. ಆದರೆ ಭಾರತದ ಹೊರಗೆ ಇದೇ ಮೊದಲ ಬಾರಿಗೆ ಎವರೆಸ್ಟ್ ಮೇಲೆ ಚಾರಣ ಮಾಡಿದ್ದಾರೆ. ಪೋರ್ಟರ್ ಅಥವಾ ಸ್ಥಳೀಯ ಮಾರ್ಗದರ್ಶಿಯ ಸಹಾಯವಿಲ್ಲದೆಯೆ ಏಕಾಂಗಿಯಾಗಿ ಚಾರಣ ಮುಗಿಸಿರುವ ಭಟ್ ಈ ಛಾಲೆಂಜ್ ಅನ್ನು ತೆಗೆದುಕೊಳ್ಳುವ ಮುನ್ನ ಸಂಪೂರ್ಣ ಸಂಶೋಧನೆ ನಡೆಸಿದ್ದಾರೆ.