ಗಾಳಿಯನ್ನು ಬಳಸಿ, ಬ್ಯಾಟರಿ ತಯಾರಿಸಿ ಸೈ ಅನ್ನಿಸಿಕೊಂಡ ಬೆಂಗಳೂರಿನ ವಿಜ್ಞಾನಿಗಳು

ಬೆಂಗಳೂರು: ಬೆಂಗಳೂರಿನ ಐಐಎಸ್ಸಿ ವಿಜ್ಞಾನಿಗಳು ಗಾಳಿಯನ್ನು ಬಳಸಿ ಪರಿಸರಸ್ನೇಹಿ ಎನಿಸುವ ಬ್ಯಾಟರಿ ಕಂಡು ಹಿಡಿದಿದ್ದಾರೆ. ಜಿಂಕ್ ಮತ್ತು ಗಾಳಿಯನ್ನು ಬಳಸಿ ಇದನ್ನು ತಯಾರಿಸಲಾಗಿದೆ.

ಈ ಬ್ಯಾಟರಿ ಪ್ರಕ್ರಿಯೆಯಲ್ಲಿ ಹೊರಬರುವ ಬೈಪ್ರಾಡಕ್ಟ್ ನೀರು ಬದಲು ಹೈಡ್ರೋಜನ್ ಪೆರಾಕ್ಸೈಡ್ ಆಗಿರುತ್ತದೆ ಎಂಬುದು ಈ ಬ್ಯಾಟರಿಯ ವಿಶೇಷತೆ ಆಗಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಸಂಶೋಧಕಿ ಅನಿಂದಾ ಜೆ ಭಟ್ಟಾಚಾರ್ಯ ಮತ್ತವರ ತಂಡದವರು ಜಿಂಕ್ ಮತ್ತು ಗಾಳಿ ಸಹಾಯದಿಂದ ಬ್ಯಾಟರಿ ಅಭಿವೃದ್ಧಿಪಡಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ.

ಏನು ವಿಶೇಷತೆ?

ವಿಜ್ಞಾನಿಗಳು ಕಂಡುಹಿಡಿದ ಈ ಬ್ಯಾಟರಿಯಲ್ಲಿ ಜಿಂಕ್ ಅನ್ನು ಆನೋಡ್ ಆಗಿಯೂ, ಗಾಳಿಯಲ್ಲಿರುವ ಆಮ್ಲಜನಕವನ್ನು ಕ್ಯಾತೋಡ್ ಆಗಿಯೂ ಬಳಸಿಕೊಳ್ಳಲಾಗುತ್ತದೆ.

ಬ್ಯಾಟರಿ ಡಿಸ್ಚಾರ್ಜ್ ಆದಾಗ ಕ್ಯಾತೋಡ್ನಲ್ಲಿರುವ ಆಕ್ಸಿಜನ್ ತಗ್ಗುತ್ತದೆ. ಸಾಮಾನ್ಯವಾಗಿ ಇದು ನೀರಾಗಿ ಪರಿವರ್ತಿತವಾಗುತ್ತದೆ. ಐಐಎಸ್ಸಿ ವಿಜ್ಞಾನಿಗಳು ಕೆಲ ಕೆಟಲಿಸ್ಟ್ಗಳನ್ನು ಬಳಸಿ, ಆಕ್ಸಿಜನ್ನ ಕೆಲ ಭಾಗವು ಹೈಡ್ರೋಜನ್ ಪೆರಾಕ್ಸೈಡ್ ಆಗಿ ಪರಿವರ್ತನೆಗೊಳ್ಳುವಂತೆ ಮಾಡುತ್ತದೆ. ಇದು ಈ ಬ್ಯಾಟರಿಯ ವಿಶೇಷತೆಯಾಗಿದೆ.ನೀರಿನ ಶುದ್ಧೀಕರಣ, ಜವಳಿ ತ್ಯಾಜ್ಯ ಶುದ್ಧೀಕರಣ, ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ಈ ಹೈಡ್ರೋಜನ್ ಪೆರಾಕ್ಸೈಡ್ ಪಡೆಯಲು ಪಲ್ಲಾಡಿಯಂ ಇತ್ಯಾದಿ ದುಬಾರಿ ಮತ್ತು ಅಮೂಲ್ಯ ಲೋಹಗಳ ಅವಶ್ಯಕತೆ ಇರುತ್ತದೆ. ಆದರೆ, ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಬ್ಯಾಟರಿಯು ಪಲ್ಲಾಡಿಯಂ ಬಳಕೆ ಇಲ್ಲದೇ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಉಪ ಉತ್ಪನ್ನವಾಗಿ ನೀಡುತ್ತಿರುವುದು ವಿಶೇಷವಾಗಿದೆ. ವಿಜ್ಞಾನಿಗಳ ಈ ಆವಿಷ್ಕಾರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.