ಬೆಂಗಳೂರು: ದೇಶಗಳ ನಗರಗಳ ಪೈಕಿ ಬೆಂಗಳೂರು ಅತೀ ಹೆಚ್ಚು ಟ್ರಾಫಿಕ್ ನಗರವಾಗಿ ಗುರುತಿಸಿಕೊಂಡಿದೆ. ಬೆಂಗಳೂರಿನ ಬಹುತೇಕ ರಸ್ತೆಗಳು ಕಿಕ್ಕಿರಿದು ತುಂಬಿರುತ್ತದೆ. ಪೀಕ್ ಸಮಯದಲ್ಲಿ ಬೆಂಗಳೂರಿನ ಪ್ರಯಾಣ ಯಾರಿಗೂ ಬೇಡ. ಅಕ್ಟೋಬರ್ ತಿಂಗಳಿನಿಂದ ಎಲ್ಲಾ ಕಂಪನಿಗಳು ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಿ ಕಚೇರಿಯಿಂದ ಕೆಲಸ ಮಾಡಲು ಸೂಚಿಸಿದೆ. ಹೀಗಾಗಿ ಬೆಂಗಳೂರು ಟ್ರಾಫಿಕ್ ಮತ್ತಷ್ಟು ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮಾತ್ರವಲ್ಲ, ಪದೇ ಪದೇ ಸಂಚಾರ ನಿಯಮ ಉಲ್ಲಂಘನೆಯಲ್ಲೂ ಮುಂದಿದೆ. ರಿಪೀಟೆಡ್ ಟ್ರಾಫಿಕ್ ರೂಲ್ಸ್ ಪ್ರಕರಣದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.
ACKO ಸಮೀಕ್ಷಾ ವರದಿ:
ಭಾರತದ ಸುರಕ್ಷತೆ ಮತ್ತು ರಕ್ಷಣೆಯ ಕ್ಷೇತ್ರದ ಅಗ್ರ ಕಂಪನಿಗಳಲ್ಲಿ ಒಂದಾದ ACKO ನಡೆಸಿದ ಸಮೀಕ್ಷಾ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ದೇಶದಲ್ಲಿ ಅತೀ ಹೆಚ್ಚು ಪುನಾವರ್ತಿತ ಸಂಚಾರ ನಿಯಮ ಉಲ್ಲಂಘನೆ ಮಾಡುವವರೂ ಬೆಂಗಳೂರಿಗರೇ ಎಂದು ಈ ಸಮೀಕ್ಷಾ ವರದಿ ಹೇಳುತ್ತಿದೆ.
ಪ್ರತಿ 10 ರಲ್ಲಿ 6 ಮಂದಿ ಸಂಚಾರ ನಿಯಮ ಉಲ್ಲಂಂಘನೆ
ದೇಶದ ಸಂಚಾರ ನಿಯಮ ಉಲ್ಲಂಘನೆ, ದಂಡ ಬಾಕಿ ಉಳಿಸಿಕೊಂಡಿರುವುದು ಸೇರಿದಂತೆ ಟ್ರಾಫಿಕ್ ರೂಲ್ಸ್ ಪಾಲನೆ ಕುರಿತು ACKO ಸಮೀಕ್ಷೆ ನಡೆಸಿ ವರದಿ ಪ್ರಕಟಿಸಿದೆ.
ಡಿಸೆಂಬರ್ 2024 ರಿಂದ ಜೂನ್ 2025 ರವರೆಗೆ ಸಮೀಕ್ಷೆ ನಡೆಸಲಾಗಿದೆ. ಇದರ ಪ್ರಕಾರ, ಬೆಂಗಳೂರಿನ ವಾಹನ ಸವಾರರ ಪೈಕಿ ಶೇ. 10.8 ರಷ್ಟು ಜನರು 10 ಕ್ಕೂ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿದ್ದಾರೆ ಎಂದು ವರದಿ ಹೇಳುತ್ತದೆ, ಇದು ಭಾರತೀಯ ಮಹಾನಗರಗಳಲ್ಲಿಯೇ ಅತ್ಯಧಿಕವಾಗಿದೆ. ಅಧ್ಯಯನದ ಸಮಯದಲ್ಲಿ, ನಗರದಲ್ಲಿ 14.5 ಲಕ್ಷಕ್ಕೂ ಹೆಚ್ಚು ಸಂಚಾರ ತಪಾಸಣೆಗಳನ್ನು ನಡೆಸಲಾಗಿದ್ದು, ಸುಮಾರು ಶೇ. 61 ಮಂದಿ ಅಂದರೆ, ಪ್ರತಿ 10 ಜನರಲ್ಲಿ ಸುಮಾರು 6 ಮಂದಿ ಕನಿಷ್ಠ ಒಂದು ಸಂಚಾರ ದಂಡವನ್ನು ಹೊಂದಿರುವುದು ಕಂಡುಬಂದಿದೆ. ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವ ಪ್ರವೃತ್ತಿ ಹೆಚ್ಚಾಗಿ ಕಂಡುಬಂದಿದ್ದು, ಹೆಚ್ಚಿನ ಪ್ರಕರಣಗಳು ಹೆಲ್ಮೆಟ್ ಸಂಬಂಧಿತ ದಂಡಗಳೇ ಕಂಡುಬಂದಿವೆ.
- ಪುನರಾವರ್ತಿತ ಅಪರಾಧಗಳು: ಬೆಂಗಳೂರಿನಲ್ಲಿ 1.56 ಲಕ್ಷ ಬಳಕೆದಾರರ ಬಳಿ 10 ಕ್ಕೂ ಹೆಚ್ಚು ದಂಡ ಬಾಕಿ ಉಳಿದಿದ್ದು, ಇದು ಭಾರತದ ಇತರ ಮಹಾನಗರಗಳಿಗೆ ಹೋಲಿಸಿದರೆ ಅತಿ ಹೆಚ್ಚು.
- ಚಲನ್ ಪರಿಶೀಲನೆಗಳು: ಬೆಂಗಳೂರಿನ ಚಾಲಕರು ಅತ್ಯಂತ ಜಾಗರೂಕರಾಗಿದ್ದು, ತಿಂಗಳಿಗೆ ಸರಾಸರಿ 4.12 ಬಾರಿ ತಮ್ಮ ಚಲನ್‌ಗಳನ್ನು ಪರಿಶೀಲಿಸುತ್ತಾರೆ ಎಂದು ಕಂಡುಬಂದಿದೆ, ಈ ವಿಷಯದಲ್ಲಿ ನಗರವು ಚೆನ್ನೈ ನಂತರದ ಎರಡನೇ ಸ್ಥಾನದಲ್ಲಿದೆ.
- ಡಿಜಿಟಲ್ ಜಾರಿಗೊಳಿಸುವಿಕೆ: ಡಿಜಿಟಲ್ ಉಲ್ಲಂಘನೆಗಳಲ್ಲಿ ಬೆಂಗಳೂರು ದೇಶದಲ್ಲೇ ಮುಂಚೂಣಿಯಲ್ಲಿದೆ, ಶೇ. 23 ರಷ್ಟು ಚಲನ್‌ಗಳನ್ನು ಕ್ಯಾಮೆರಾಗಳು ಮತ್ತು ಮೊಬೈಲ್ ಸಾಧನಗಳ ಮೂಲಕ ನೀಡಲಾಗಿದೆ.
- ಹೆಲ್ಮೆಟ್ ಧರಿಸದೇ ಇರುವುದು: ದೇಶಾದ್ಯಂತ ಕಂಡುಬರುವ ಅತ್ಯಂತ ಸಾಮಾನ್ಯವಾದ ಸಂಚಾರ ಉಲ್ಲಂಘನೆಯಾಗಿದ್ದು, 10.5 ಮಿಲಿಯನ್‌ಗಿಂತಲೂ ಹೆಚ್ಚು ಹೆಲ್ಮೆಟ್ ಸಂಬಂಧಿತ ಅಪರಾಧಗಳು ದಾಖಲಾಗಿವೆ. ಎಲ್ಲಾ ಚಲನ್‌ಗಳ ಶೇಕಡಾ 34.8 ಪ್ರತಿಶತ ಈ ಉಲ್ಲಂಘನೆಗಳು ಕಂಡುಬಂದಿದೆ.
- ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಜನರು: ಬೆಂಗಳೂರಿನ (ಸುಮಾರು 11%) ನಂತರ, ಅತಿ ಹೆಚ್ಚು ಪದೇ ಪದೇ ನಿಯಮ ಉಲ್ಲಂಘಿಸುವ ನಗರಗಳು ಚೆನ್ನೈ (8%), ದೆಹಲಿ (6%), ಮುಂಬೈ (5%) ಮತ್ತು ಪುಣೆ (3%).
- ಅತಿ ಹೆಚ್ಚು ಪ್ರಕರಣಗಳ ದರಗಳು: ದೆಹಲಿಯಲ್ಲಿ ಅತಿ ಹೆಚ್ಚು ಚಲನ್‌ಗಳು ದಾಖಲಾಗಿದ್ದು, ಶೇ. 73 ರಷ್ಟು ಬಳಕೆದಾರರು ಕನಿಷ್ಠ ಒಂದು ಚಲನ್ ಹೊಂದಿದ್ದರೆ, ನಂತರದ ಸ್ಥಾನಗಳಲ್ಲಿ ಚೆನ್ನೈ (ಶೇ. 64) ಮತ್ತು ಮುಂಬೈ (ಶೇ. 62) ಇವೆ.
- ಚಲನ್ ಪರಿಶೀಲನೆ: ಸಂಚಾರ ದಂಡಗಳನ್ನು ಪರಿಶೀಲಿಸುವಲ್ಲಿ ಚೆನ್ನೈ ಅತ್ಯಂತ ಸಕ್ರಿಯವಾಗಿದೆ. ಸರಾಸರಿಯಾಗಿ, ಅಲ್ಲಿನ ಪ್ರತಿಯೊಬ್ಬ ವ್ಯಕ್ತಿಯು ಪ್ರತಿ ತಿಂಗಳು ಸುಮಾರು 5 ಬಾರಿ ತಮ್ಮ ದಂಡವನ್ನು ಪರಿಶೀಲಿಸುತ್ತಾರೆ ಎಂದು ಕಂಡುಬಂದಿದೆ.
- ಅತ್ಯಧಿಕ ದಂಡ: ದೆಹಲಿಯಲ್ಲಿ ಅತಿ ಹೆಚ್ಚು ದಂಡ ಪಾವತಿಯಾಗಿದೆ, ಚಾಲಕನೋರ್ವ ಐದು ಚಲನ್‌ಗಳಬರೋಬ್ಬರಿ ₹61,000 ಪಾವತಿಸಿದ್ದಾರೆ.


















