ಬೆಂಗಳೂರು : ತಮಿಳುನಾಡಿಗೆ ಕಾವೇರಿ ನದಿ ನೀರು ಬಿಟ್ಟಿರುವುದನ್ನು ವಿರೋಧಿಸಿ ವಿವಿಧೆಡೆ ಪ್ರತಿಭಟನೆ

ಬೆಂಗಳೂರು: ರಾಜ್ಯ ಬರದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕ್‌ ರಸ್ತೆಗಳಲ್ಲಿ ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದರು.

”ರಾಜ್ಯ ಸಂಕಷ್ಟದಲ್ಲಿ ಇದ್ದಾಗ ನೀರು ಬಿಡಬೇಡಿ, ಯಾವುದೇ ಸಮಸ್ಯೆಗೂ ಸರ್ಕಾರದೊಂದಿಗೆ ನಾವು ಇದ್ದೇವೆ ಎಂದರೂ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಸರ್ವಪಕ್ಷಗಳ ಸಭೆಯಲ್ಲಿ ರೈತರನ್ನು, ಕನ್ನಡಪರ ಸಂಘಟನೆಗಳನ್ನು ಹೊರಗಿಟ್ಟು ತೀರ್ಮಾನ ತೆಗೆದುಕೊಂಡಿದ್ದಾರೆ. ಯಾವುದೇ ಪಕ್ಷವೂ ಅಧಿಕಾರದಲ್ಲಿದ್ದಾಗ ರಾಜ್ಯದ ಪರ ನಿರ್ಧಾರ ಕೈಗೊಂಡಿಲ್ಲ. ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವುದನ್ನು ಬಿಟ್ಟು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.

ಬೆಂಗಳೂರಿನ ಫ್ರೀಡಂ ಪಾರ್ಕ್‌ ರಸ್ತೆಗಳಲ್ಲಿ ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದರು.ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ವಿರೋಧಿಸಿ ಇಂದು (ಶನಿವಾರ) ರಾಜ್ಯದ ವಿವಿಧೆಡೆ ರೈತಪರ ಹಾಗೂ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ ಎನ್‌ ಜಗದೀಶ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

”ಕನ್ನಡಪರ ಹಾಗೂ ರೈತ ಸಂಘಟನೆಗಳು ಸ್ವಾರ್ಥದಿಂದಲ್ಲ, ಅಭಿಮಾನದಿಂದ ಹೋರಾಟ ಮಾಡುತ್ತಿದ್ದೇವೆ. ಸುಗ್ರೀವಾಜ್ಞೆ ಮೂಲಕ ರಾಜ್ಯ ಸರಕಾರ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಈ ಕೂಡಲೇ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವ ನಿರ್ಧಾರ ಕೈಗೊಳ್ಳಬೇಕು. ಇಲ್ಲದೇ ಇದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದ ಜನಪ್ರತಿನಿಧಿಗಳ ಮನೆ ಮತ್ತು ಕಚೇರಿಗಳ ಮುಂದೆ ನಿರಂತರ ಧರಣಿ ಮಾಡಲಿದ್ದೇವೆ” ಎಂದು ಜಯ ಕರ್ನಾಟಕ ಸಂಘಟನೆ ಎಚ್ಚರಿಕೆ ನೀಡಿದೆ.

25 ಬಿಜೆಪಿ ಸಂಸದರು ಸ್ವಾಭಿಮಾನ ತೋರಿಸಬೇಕು. ಸರಿಯಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡದೇ ಇದ್ದಂತಹ ಅಧಿಕಾರಿಗಳು ಮತ್ತು ಕಾನೂನು ತಂಡದ ಮೇಲೆ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್‌ ಪಕ್ಷ ತಮಿಳುನಾಡಿನ ತಮ್ಮ ಮಿತ್ರ ಪಕ್ಷವನ್ನು ಮನವೊಲಿಸಬಹುದಿತ್ತು. ಇವರೆಲ್ಲರೂ ಸೇರಿಕೊಂಡು ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ್ದಾರೆ” ಎಂದು ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ ಎನ್‌ ಜಗದೀಶ್‌ ಆರೋಪಿಸಿದರು.