ಬೆಂಗಳೂರು: ಮಕ್ಕಳನ್ನು ಮನೆಗೆ ಕರೆದೊಯ್ದ ಪೋಷಕರು, ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ

ಬೆಂಗಳೂರು: ನಗರದ 15 ಶಾಲೆಗಳ ಆಡಳಿತ ಮಂಡಳಿಯ ಇ-ಮೇಲ್​ಗೆ ಬೆದರಿಕೆ ಸಂದೇಶಗಳು ಬಂದಿವೆ.ರಾಜಧಾನಿ ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಇಂದು ಬೆದರಿಕೆ ಹಾಕಿದ್ದಾರೆ.

ನಗರದ ಕೆಲವು ಶಾಲೆಗಳಿಗೆ ಇಂದು ಬೆಳಗ್ಗೆ ಇಮೇಲ್ ಮೂಲಕ ‘ಬಾಂಬ್ ಬೆದರಿಕೆ’ ಕರೆಗಳನ್ನು ಕಳುಹಿಸಲಾಗಿದೆ. ಈ ಬಗ್ಗೆ ನಮ್ಮ ಬಾಂಬ್ ಪತ್ತೆ ದಳದವರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈವರೆಗಿನ ತಪಾಸಣೆಯಿಂದ ಇವು ಸುಳ್ಳು ಕರೆಗಳೆಂದು ಕಂಡುಬರುತ್ತಿದೆ. ಆದಾಗ್ಯೂ ಇಮೇಲ್ ಕಳುಹಿಸಿದ ವ್ಯಕ್ತಿಗಳ ಪತ್ತೆಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಸವೇಶ್ವರ ನಗರದ ನ್ಯಾಷನಲ್, ವಿದ್ಯಾಶಿಲ್ಪ, ಎನ್​​ಪಿಎಸ್, ಕಾರ್ಮೆಲ್, ಹೆಬ್ಬಗೋಡಿಯ ಎಬಿನೈಜರ್ ಸೇರಿದಂತೆ 15 ಶಾಲೆಗಳಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಎಂದಿನಂತೆ‌ ಶಾಲೆಗಳು ಆರಂಭವಾಗುತ್ತಿದ್ದಂತೆ, ಶಾಲೆಗಳ ಇಮೇಲ್‌ ಪರಿಶೀಲಿಸಿದ್ದು, ಬೆದರಿಕೆ ಸಂದೇಶ ಬಂದಿದ್ದು ಗೊತ್ತಾಗಿದೆ. ಕೂಡಲೇ ಶಾಲಾ ಆಡಳಿತ ಮಂಡಳಿಗಳು ಮಕ್ಕಳನ್ನು ಶಾಲೆಯಿಂದ ಹೊರ ಕಳುಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಬಾಂಬ್ ನಿಷ್ಕ್ರಿಯ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದರು. ಬಾಂಬ್ ಬೆದರಿಕೆ ಸಂದೇಶ ತಿಳಿಯುತ್ತಿದ್ದಂತೆ ಪೋಷಕರು ಆತಂಕ ವ್ಯಕ್ತಪಡಿಸಿ ಸ್ಥಳಕ್ಕೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಶಾಲೆಗಳಿಗೆ ಭೇಟಿ ನೀಡಿದರು.

“ಬಸವೇಶ್ವರ ನಗರದ ವಿದ್ಯಾಶಿಲ್ಪ ಶಾಲೆ ಸೇರಿದಂತೆ 7 ಶಾಲೆಗೂ ಬೆದರಿಕೆ ಮೇಲ್ ಫಾರ್ವರ್ಡ್ ಆಗಿದೆ. ಯಾರೂ ಗಾಬರಿ ಬೀಳುವ ಅಗತ್ಯವಿಲ್ಲ. ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಇಂದು ಬೆಳಿಗ್ಗೆ 6.10ಕ್ಕೆ ಇಮೇಲ್ ಬಂದಿದೆ” ಎಂದು ರಾಜಾಜಿನಗರ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಸಚಿವರ ಪ್ರತಿಕ್ರಿಯೆ: “ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೂಲ‌ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ. ತುಮಕೂರಿನಿಂದ ಬೆಂಗಳೂರಿಗೆ ವಾಪಸ್ ಆದ ನಂತರ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಪೋಷಕರು, ಮಕ್ಕಳು ಆತಂಕಪಡುವುದು ಬೇಡ” ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಆನೇಕಲ್​ನ ಶಾಲೆಗಳಿಗೂ ಬೆದರಿಕೆ: ಆನೇಕಲ್‌ನ ಶಾಲೆಗಳಿಗೂಬಾಂಬ್ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಎಬಿನೈಜರ್ ಶಾಲೆಗೆ ಹೆಬ್ಬಗೋ ಡಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಆಗಮಿಸಿ, ಶೋಧ ಕಾರ್ಯ ನಡೆಸಿತು. ‘ಉದ್ದೇಶಪೂರ್ವಕವಾಗಿ ಬೆದರಿಕೆ ಸಂದೇಶ ಕುಳುಹಿಸಿದ್ದಾರೆ, ಮೇಲ್ನೋಟಕ್ಕೆ ಇದು ಹುಸಿ ಬೆದರಿಕೆ ಸಂದೇಶದಂತೆ ತೋರುತ್ತಿದೆ’ ಎಂದು ಹೆಬ್ಬಗೋಡಿ ಪೊಲೀಸರು ತಿಳಿಸಿದರು.”ಕಾರ್ಮೆಲ್ ಶಾಲೆ ಸೇರಿ ಬಸವೇಶ್ವರ ನಗರದ ಎಲ್ಲ ಇಳು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಎಲ್ಲೆಡೆ ಆತಂಕ ಉಂಟಾಗಿದೆ. ಯಾರೂ ಆತಂಕಪಡದಂತೆ ನೋಡಿಕೊಳ್ಳುತ್ತಿದ್ದೇವೆ” ಎಂದು ಕಾರ್ಮೆಲ್ ಶಾಲೆಯ ಕಾರ್ಯದರ್ಶಿ ಗಂಗಾಧರ್ ತಿಳಿಸಿದರು.

ತಮಿಳುನಾಡು ಮೂಲದ ಬಾಲಕನೊಬ್ಬ ಸಿದ್ಧಪಡಿಸಿದ್ದ ಸಾಫ್ಟ್​ವೇರ್​ ಬಳಸಿಕೊಂಡು ದುಷ್ಕರ್ಮಿಗಳು ಬೆದರಿಕೆ ಇ-ಮೇಲ್​ ಕಳಿಸಿದ್ದರೆಂಬುದು ಪೊಲೀಸ್​ ವಿಚಾರಣೆ ವೇಳೆ ತಿಳಿದುಬಂದಿತ್ತು. ಈ ಘಟನೆಯ ಆರೋಪಿಗಳು ಇದುವರೆಗೂ ಪತ್ತೆಯಾಗಿಲ್ಲ.ಕಳೆದ ವರ್ಷವೂ ನಡೆದಿತ್ತು ಘಟನೆ: ಕಳೆದ ವರ್ಷ ಏಪ್ರಿಲ್​​ನಲ್ಲಿ ಕೂಡ ಬೆಂಗಳೂರಿನ 10ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಏಕಕಾಲದಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಬಳಿಕ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದಾಗ ಇದೊಂದು ಹುಸಿ ಬಾಂಬ್​ ಕರೆ ಎಂಬುದು ದೃಢಪಟ್ಟಿತ್ತು.​ ಬೆದರಿಕೆ ಬೆನ್ನಲ್ಲೇ ಪೋಷಕರು ಶಾಲೆಗಳತ್ತ ಧಾವಿಸಿ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದರು. ಈ ಬಗ್ಗೆ ಮಾಹಿತಿ ನೀಡಿದ್ದ ಪೊಲೀಸರು ಖಾಸಗಿ ಶಾಲೆಗಳಿಗೆ‌ ಬೇರೆ ಬೇರೆ ಇ-ಮೇಲ್‌ ಐಡಿ ಮೂಲಕ ಆರೋಪಿ ಮೇಲ್‌ ಕಳಿಸಿದ್ದಾನೆ. ಆದರೆ, ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ. ಬಾಂಬ್ ಬೆದರಿಕೆ ಬಗ್ಗೆ ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದರು.