ಬೆಂಗಳೂರು: ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವರ್ಚುವಲ್ ಮೂಲಕ ಇಂದು ಉದ್ಘಾಟಿಸಿದ್ದಾರೆ.3ಡಿ ಪ್ರಿಂಟಿಂಗ್ ಟೆಕ್ನಾಲಜಿ ಬಳಸಿ ನಿರ್ಮಿಸಲಾಗಿರುವ ಅಂಚೆ ಕಚೇರಿ ಕಟ್ಟಡವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರಿನಲ್ಲಿ ಇಂದು ಉಧ್ಘಾಟನೆ ಮಾಡಿದರು.ಇದು ಸಂಪೂರ್ಣ ಸ್ವಯಂಚಾಲಿತ ಕಟ್ಟಡ ನಿರ್ಮಾಣ ತಂತ್ರಜ್ಞಾನವಾಗಿದ್ದು, ಇದರಲ್ಲಿ ರೊಬೊಟಿಕ್ ಪ್ರಿಂಟರ್ ಅನುಮೋದನೆ ನೀಡಿರುವ ವಿನ್ಯಾಸದ ಪ್ರಕಾರ ವಿಶೇಷ ದರ್ಜೆಯ ಕಾಂಕ್ರೀಟ್ ಅನ್ನು ಲೇಯರ್-ಬೈ-ಲೇಯರ್ ಜೋಡಿಸುತ್ತಾ ಹೋಗುತ್ತದೆ. ಪದರಗಳ ನಡುವಿನ ಬಂಧವನ್ನು ಖಚಿತಪಡಿಸಿಕೊಳ್ಳಲು ತ್ವರಿತವಾಗಿ ಗಟ್ಟಿಯಾಗುವ ಕಾಂಕ್ರೀಟ್ ಅನ್ನು ಬಳಸಲಾಗಿದೆ. ಸಾಂಪ್ರದಾಯಿಕ ವಿಧಾನದಲ್ಲಿ 6ರಿಂದ 8 ತಿಂಗಳು ತೆಗೆದುಕೊಳ್ಳುವ ನಿರ್ಮಾಣ ಚಟುವಟಿಕೆಗಳನ್ನು ಈ ಮೂಲಕ ಕೇವಲ 45 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ವೆಚ್ಚ ಮತ್ತು ಸಮಯದ ಉಳಿತಾಯದಿಂದ ಈ 3ಡಿ-ಕಾಂಕ್ರೀಟ್ ಮುದ್ರಣ ತಂತ್ರಜ್ಞಾನವು ಸಾಂಪ್ರದಾಯಿಕ ಕಟ್ಟಡ ಪದ್ಧತಿಗಳಿಗೆ ಪರ್ಯಾಯವಾಗಿ ರೂಪುಗೊಂಡಿದೆ. ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಇದಾಗಿದೆ. ಎಲ್&ಟಿ ಮೂಲಕ ಈ ಅಂಚೆ ಕಚೇರಿಯನ್ನು ನಿರ್ಮಿಸಲಾಗಿದ್ದು ಐಐಟಿ ಚೆನ್ನೈ ಪ್ರಸ್ತುತ ಯೋಜನೆಯಲ್ಲಿ ಅಂಚೆ ಇಲಾಖೆಗೆ ತಾಂತ್ರಿಕ ಮಾರ್ಗದರ್ಶನ ಒದಗಿಸಿದೆ. ಒಟ್ಟು 1021 ಚದರ ಅಡಿ ವಿಸ್ತೀರ್ಣ ಹೊಂದಿದ್ದು 3ಡಿ ಕಾಂಕ್ರೀಟ್ ಮುದ್ರಣ ತಂತ್ರಜ್ಞಾನದ ಸಹಾಯದಿಂದ ಈ ಕಟ್ಟಡ ನಿರ್ಮಾಣಗೊಂಡಿದೆ.
ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಲಿಕಾಂ ಉಪಕರಣಗಳನ್ನು ತಯಾರಿಸಲಾಗುತ್ತಿದೆ. ದೇಶವು ದೇಶೀಯವಾಗಿ 4ಜಿ ಮತ್ತು 5ಜಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ವಂದೇ ಭಾರತ್ ಅಂತಹ ವಿಶ್ವದರ್ಜೆಯ ರೈಲುಗಳನ್ನು ವಿನ್ಯಾಸಗೊಳಿಸಬಹುದು ಮತ್ತು ತಯಾರಿಸಬಹುದು ಎಂದು ಭಾರತ ಸಾಬೀತುಪಡಿಸಿದೆ ಎಂದು ತಿಳಿಸಿದರು.
3ಡಿ ಮುದ್ರಣವು ಈಗ ನವೋದ್ಯಮಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವ ಪ್ರಾತ್ಯಕ್ಷಿಕೆ ತಂತ್ರಜ್ಞಾನ. ಇದು ವೆಚ್ಚ ಉಳಿತಾಯದ, ಪರಿಸರಸ್ನೇಹಿ ಮತ್ತು ಆತ್ಮನಿರ್ಭರ ಭಾರತ್ ಪರಿಕಲ್ಪನೆಯನ್ನು ತಿಳಿಸುತ್ತದೆ ಎಂದು ವಿವರಿಸಿದರು.
ವರ್ಚುವಲ್ ಮೂಲಕ ಕಟ್ಟಡ ಉಧ್ಘಾಟನೆ ಮಾಡಿದ ಕೇಂದ್ರ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ಬಲಿಷ್ಠ ನಾಯಕತ್ವದಲ್ಲಿ ಭಾರತ ದೇಶವು ಸ್ಥಳೀಯ ಸೊಗಡಿನೊಂದಿಗೆ ತಂತ್ರಜ್ಞಾನ ನಾವೀನ್ಯತೆಯಲ್ಲಿ ದಾಪುಗಾಲು ಹಾಕುತ್ತಿದೆ. ಅಗತ್ಯವಾದ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿರುವ ಕೇಂದ್ರ ಸರ್ಕಾರವು, ನಮ್ಮ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಹೊಸ ಆವಿಷ್ಕಾರಗಳಿಗೆ ಪ್ರೇರೇಪಿಸಲು ಬದ್ಧ ಎಂದು ನುಡಿದರು.
ನಗರದ ಕೇಂಬ್ರಿಡ್ಜ್ ಲೇಔಟ್ನಲ್ಲಿರುವ ಹೊಸ ಅಂಚೆ ಕಚೇರಿ ಕಟ್ಟಡವನ್ನು ಐಐಟಿ ಮದ್ರಾಸ್ ಮತ್ತು ʻಲಾರ್ಸನ್ ಮತ್ತು ಟುಟ್ರೋ ಲಿಮಿಟೆಡ್‌ನ (ಎಲ್&ಟಿ) ತಾಂತ್ರಿಕ ಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ಮಾದರಿ ಯೋಜನೆಯ ಕಿರು ವಿಡಿಯೊವನ್ನು ಸಹ ಪ್ರಸಾರ ಮಾಡಲಾಯಿತು. ಬಳಿಕ ಸಚಿವರು 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡದ ಮೇಲೆ ವಿಶೇಷ ಕವರ್ ಬಿಡುಗಡೆ ಮಾಡಿದರು. ಅದರ ಪ್ರತಿಕೃತಿ ಅನಾವರಣಗೊಳಿಸಿದರು.
ಮಾಧ್ಯಮ ಪ್ರತಿಕ್ರಿಯೆ: ಹೊರಗಡೆ ಸೇರಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಉಪ-ನಗರ ರೈಲು ಸೇವೆಯನ್ನು ಪ್ರಾರಂಭಿಸುವ ಕೇಂದ್ರ ಸರ್ಕಾರದ ಬದ್ಧತೆ ಹಾಗೆಯೇ ಉಳಿದಿದೆ. ಶರವೇಗದ ರೈಲುಗಳ ಓಡಾಟಕ್ಕಾಗಿ 4000 ಕಿ.ಮೀ ರೈಲ್ವೆ ಹಳಿಗಳನ್ನು ನವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
3ಡಿ ತಂತ್ರಜ್ಞಾನದ ಮೂಲಕ ನಿರ್ಮಿಸಲಾದ ಈ ಕಟ್ಟಡದ ಒಟ್ಟು ವಿಸ್ತೀರ್ಣ 1021 ಚದರ ಅಡಿಗಳಾಗಿದೆ. ಕಟ್ಟಡವನ್ನು ಅನುಮೋದಿತ ವಿನ್ಯಾಸದ ಪ್ರಕಾರ, 3ಡಿ ಕಾಂಕ್ರೀಟ್ ಮುದ್ರಣ ತಂತ್ರಜ್ಞಾನದ ಸಹಾಯದಿಂದ ನಿರ್ಮಿಸಲಾಗಿದೆ. ಐಐಟಿ ಚೆನ್ನೈ ಪ್ರಸ್ತುತ ಯೋಜನೆಯಲ್ಲಿ ಅಂಚೆ ಇಲಾಖೆಗೆ ತಾಂತ್ರಿಕ ಮಾರ್ಗದರ್ಶನ ಒದಗಿಸಿದೆ.
ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ ರಾಜೇಂದ್ರ ಕುಮಾರ್ ತಮ್ಮ ಪರಿಚಯಾತ್ಮಕ ಭಾಷಣದಲ್ಲಿ ತಂತ್ರಜ್ಞಾನ ಆಧಾರಿತ 3ಡಿ ಮುದ್ರಿತ ಅಂಚೆ ಕಚೇರಿಯ ಉದ್ದೇಶಗಳನ್ನು ವಿವರಿಸಿದರು. ಐಐಟಿ ಮದ್ರಾಸ್ನ ಸಿವಿಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಮತ್ತು ಡೀನ್ ಪ್ರೊ. ಮನು ಸಂತಾನಮ್ 3ಡಿ ಮುದ್ರಿತ ಅಂಚೆ ಕಚೇರಿ ನಿರ್ಮಾಣದ ತಾಂತ್ರಿಕ ವಿವರಗಳನ್ನು ಹಂಚಿಕೊಂಡರು. ಸಂಸದರಾದ ಪಿ.ಸಿ.ಮೋಹನ್ ಮತ್ತು ಸದಾನಂದ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ಮೆಚ್ಚುಗೆ: ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ನಿರ್ಮಾಣಗೊಂಡ ದೇಶದ ಪ್ರಥಮ 3ಡಿ ಪ್ರಿಂಟೆಡ್ ಪೋಸ್ಟ್ ಆಫೀಸ್ ದೇಶದ ಜನರಿಗೆ ಹೆಮ್ಮೆಯ ವಿಚಾರವಾಗಲಿದೆ. ದೇಶದ ಸೃಜನಶೀಲತೆ ಮತ್ತು ಅಭಿವೃದ್ಧಿಗೆ ಇದೊಂದು ಉದಾಹರಣೆ. ಅಷ್ಟೇ ಅಲ್ಲ, ಇದು ದೇಶ ಸ್ವಾವಲಂಬನೆಯ ಹಾದಿಯಲ್ಲಿ ಸಾಗುತ್ತಿರುವುದರ ಕುರುಹು. ಇಂಥ ಪೋಸ್ಟ್ ಆಫೀಸ್ ನಿರ್ಮಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಮೆಚ್ಚುಗೆ ತಿಳಿಸಿದ್ದಾರೆ.ಮುಂದಿನ ನಾಲ್ಕರಿಂದ ಐದು ವರ್ಷಗಳಲ್ಲಿ ಹೆಚ್ಚಿನ ವಂದೇ ಭಾರತ್ ರೈಲುಗಳನ್ನು ಓಡಿಸಲು ಅನುವು ಮಾಡಿಕೊಡಲು ಹಳಿಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ-2023 ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಇದು ಸಮಾಜದ ಎಲ್ಲಾ ವಿಭಾಗಗಳನ್ನು ಒಳಗೊಂಡ ಸಮತಲ ಕಾಯ್ದೆಯಾಗಿದೆ. ತಜ್ಞರು ಸೇರಿದಂತೆ ಹಲವರ ಜೊತೆ ವ್ಯಾಪಕವಾದ ಸಮಾಲೋಚಯ ನಂತರ ಜಾರಿಗೆ ತರಲಾಗಿದೆ ಎಂದು ಹೇಳಿದರು.












