ಮನೆಯಿಂದ ಹೊರಗಡೆ ಬರಬೇಡಿಯೆಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಪುಂಡರು

ಬೆಂಗಳೂರು: ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿ ಇದ್ದರೂ ಬೆಂಗಳೂರಿನ ಸಂಜಯನಗರ ಠಾಣೆಯ ಪೊಲೀಸರ ಮೇಲೆ ಏಕಾಏಕಿಯಾಗಿ ಕಿಡಿಗೇಡಿಗಳ ಗುಂಪೊಂದು ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದೆ.

ಕೊರೊನಾ ಸೋಂಕು‌ ಹರಡುವುದನ್ನು ನಿಯಂತ್ರಿಸಲು ಪೊಲೀಸರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಆದರೆ ಇನ್ನೊಂದೆಡೆ ಪುಂಡ ಯುವಕರು ಸರ್ಕಾರದ ಆದೇಶವನ್ನು‌ ಉಲ್ಲಂಘಿಸಿ ರಸ್ತೆಗಿಳಿಯುತ್ತಿದ್ದು, ಮತ್ತಷ್ಟು ಆತಂಕ ಸೃಷ್ಟಿಸುತ್ತಿದ್ದಾರೆ. ಈ ಕಿಡಿಕೇಡಿಗಳನ್ನು‌ ತಡೆಯಲು ಬರುವ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗುತ್ತಿದ್ದಾರೆ. ಬೆಂಗಳೂರಿನ ಸಂಜಯನಗರ ರಸ್ತೆಯಲ್ಲಿ ಇಂದು ಅಡ್ಡಾದಿಡ್ಡಿಯಾಗಿ ಸಂಚಾರ ಮಾಡುತ್ತಿದ್ದ ಕಿಡಿಗೇಡಿಗಳ ಗುಂಪೊಂದಕ್ಕೆ ಪೊಲೀಸ ಸಿಬ್ಬಂದಿಗಳಾದ ಮಂಜುನಾಥ ಹಾಗೂ ಬಸವರಾಜ್ ಲಾಠಿಯ ರುಚಿ ತೋರಿಸಲು ಮುಂದಾಗಿದ್ದರು. ಆದರೆ ಆ ಕಿಡಿಗೇಡಿಗಳು ಪೊಲೀಸರ ಮೇಲೆಯೇ ದಿಢೀರ್ ಆಗಿ ಎರಗಿಬಿದ್ದು ಹಲ್ಲೆ ನಡೆಸಿದ್ದಾರೆ.

ಮನೆಯಿಂದ ಹೊರ ಬರಬೇಡಿ ಎಂದ ಕಾರಣಕ್ಕೆ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಈ ಇಬ್ಬರು ಪುಂಡರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.