ಮಂಗಳೂರು: ಕೋಮು ಸಂಘರ್ಷವನ್ನು ಮೀರಿ, ಕೋಮು ಸೌಹಾರ್ದತೆಗಾಗಿ ಹಿಂದೂ ಜೋಡಿಯ ಮದುವೆಯ ಔತಣ ಕೂಟವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಜೂರು ಮಸೀದಿ ವಠಾರದಲ್ಲಿ ನಡೆಯಿತು.
ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಕಾಜೂರಿನ ತುಂಗಪ್ಪ ಪೂಜಾರಿ ಮತ್ತು ದೇವಕಿ ದಂಪತಿ ಪುತ್ರ ಅವಿನಾಶ್ ಕೆ. ಹಾಗೂ ಮಂಗಳೂರಿನ ಜೆಪ್ಪು ವಿಶ್ವನಾಥ ಎಂಬವರ ಪುತ್ರಿ ಕೌಶಿಕಾರ ವಿವಾಹ ಬೆಳ್ತಂಗಡಿ ತಾಲೂಕಿನ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನೆರವೇರಿತು. ನದಿಯ ಒಂದು ದಡದಲ್ಲಿ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನವಿದೆ. ಇನ್ನೊಂದು ದಡದಲ್ಲಿ ಇತಿಹಾಸ ಪ್ರಸಿದ್ದ ಕಾಜೂರು ದರ್ಗಾ ಇದೆ. ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿರುವಂತೆ ಕೊಲ್ಲಿ ದೇವಸ್ಥಾನದಲ್ಲಿ ಮದುವೆ ಸಮಾರಂಭ ನಡೆದ ಬಳಿಕ ನದಿಯಾಚೆ ದಡದಲ್ಲಿರುವ ಕಾಜೂರು ಮಸೀದಿ ವಠಾರದಲ್ಲಿ ಹಾಕಲಾಗಿದ್ದ ವಿಶಾಲವಾದ ಪೆಂಡಾಲ್‌ನಲ್ಲಿ ನವ ವಧು, ವರರ ಬಂಧುಮಿತ್ರರಿಗಾಗಿ ಔತಣಕೂಟ ನಡೆಯಿತು. ಅವಿನಾಶ್ ಯುವ ಉದ್ಯಮಿಯಾಗಿದ್ರೆ ವಧು
ಕೌಶಿಕಾ ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ. ಕೊಲ್ಲಿ ದೇವಸ್ಥಾನದಲ್ಲಿ ನಡೆದ ಮದುವೆಗೆ ಮತ್ತು ಕಾಜೂರು ಮಸೀದಿ ಆವರಣದಲ್ಲಿ ನಡೆದ ಔತಣಕೂಟಕ್ಕೆ ಜಾತಿಯ ಮತ ಭೇದವಿಲ್ಲದೆ ಸ್ಥಳೀಯ ಎಲ್ಲ ಸಮುದಾಯದವರನ್ನೂ ಆಹ್ವಾನಿಸಲಾಗಿತ್ತು. ಈ ವಿಶೇಷ ಔತಣಕೂಟ ನಾಡಿಗೊಂದು ಶಾಂತಿ, ಸಾಮರಸ್ಯದ ಸಂದೇಶ ನೀಡಿದಂತಾಗಿದೆ.












