ಬೆಳ್ತಂಗಡಿ: 38ರಿಂದ 347ಕ್ಕೆ ಏರಿತು‌ ಕನ್ನಡ ಶಾಲಾ ಮಕ್ಕಳ ಸಂಖ್ಯೆ: ಆಂಗ್ಲ ಮಾಧ್ಯಮದಿಂದ‌ ಕನ್ನಡ ಶಾಲೆಗೆ ಬಂದ್ರು 50 ವಿದ್ಯಾರ್ಥಿಗಳು !

-ಜಿವೇಂದ್ರ ಶೆಟ್ಟಿ ಗರ್ಡಾಡಿ

ಬೆಳ್ತಂಗಡಿ: ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆಯಿಂದಾಗಿ ಕನ್ನಡ ಶಾಲೆಗಳು ಅವನತಿಯತ್ತ ಸಾಗುತ್ತಿರುವುದು ಹೊಸತೇನಲ್ಲ. ಸಾವಿರಾರು ಸರಕಾರಿ, ಅನುದಾನಿತ ಕನ್ನಡ ಶಾಲೆಗಳಿಗೆ ಬೀಗ ಜಡಿದಿರುವ ಉದಾಹರಣೆ ನಮ್ಮಮುಂದಿದೆ. ಖಾಸಗಿ ಶಾಲೆಗಳು ಆಂಗ್ಲ ಮಾಧ್ಯಮವಾಗಿ ಪರಿವರ್ತನೆಗೊಂಡಿದೆ.  ರಾಜ್ಯದಲ್ಲಿ ಸಾವಿರಾರು ಕನ್ನಡ ಶಾಲೆಗಳು ಇತಿಹಾಸದ ಪುಟ ಸೇರಿವೆ.

ಇದೇ ರೀತಿ ಇನ್ನು ಕೆಲವೇ ವರ್ಷಗಳಲ್ಲಿ ಮುಚ್ಚಿಹೋಗುವ ಆತಂಕದಲ್ಲಿದ್ದ ಕನ್ನಡ ಮಾಧ್ಯಮ ಅನುದಾನಿತ ಶಾಲೆಯೊಂದರಲ್ಲಿ ಅಚ್ಚರಿಯೆಂಬಂತೆ 300ಕ್ಕೂ ಅಧಿಕ ಮಕ್ಕಳ‌ ಕಲರವ ಕೇಳಿಬರುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ‌ ಗ್ರಾಮದಲ್ಲಿರುವ, ಕಳೆದ ವಾರ್ಷಿಕ ಅಂತ್ಯದ ವೇಳೆ 44 ಮಕ್ಕಳಿದ್ದ ಸರಕಾರಿ ಅನುದಾನಿತ ಶಾಲೆಯಲ್ಲಿ ಇದೀಗ ಮಕ್ಕಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. 2019ರ ಶಾಲಾ ವರ್ಷಾಂತ್ಯದಲ್ಲಿ 6 ಮಂದಿ 7ನೇ ತರಗತಿ ಮುಗಿಸಿ ತೇರ್ಗಡೆ ಹೊಂದಿದ್ದು, 38 ಮಂದಿ ಉಳಿದಿದ್ದರು. ಆದರೆ ಜೂನ್ ತಿಂಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಬರೊಬ್ಬರಿ 347ಕ್ಕೆ ತಲುಪಿದೆ.

 

ಅವನತಿಯಂಚಿನಲ್ಲಿದ್ದ ಶಾಲೆ:

68 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಶಾಲೆ ಅದೆಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಇದೇ ಶಾಲೆಯಲ್ಲಿ ಶಿಕ್ಷಣ ಪಡೆದವರು ಇಂದು ದೇಶವಿದೇಶಗಳಲ್ಲಿ ಉನ್ನತ ಸ್ಥಾನಮಾನದಲ್ಲಿದ್ದಾರೆ. ಆದರೆ ಇತ್ತ ಗಲ್ಲಿಗೊಂದರಂತೆ ಆಂಗ್ಲ ಮಾಧ್ಯಮ ಶಾಲೆಗಳ ಸ್ಥಾಪನೆಯಿಂದ ಎಲ್ಲೆಡೆಯಂತೆ ಈ ಕನ್ನಡ ಶಾಲೆಯು ಅವನತಿಯತ್ತ ತಲುಪಿತ್ತು. ಈ ಶಾಲೆಯಲ್ಲೂ‌ ಕಳೆದ ಕೆಲ ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕುಸಿದಿತ್ತು. ಹೀಗಾಗಿ ಹೇಗಾದರೂ ಈ  ಶಾಲೆಯನ್ನು ಉಳಿಸಬೇಕು, ಅಭಿವೃದ್ಧಿ ಪಡಿಸಬೇಕು ಎನ್ನುವ ನಿಟ್ಟಿನಲ್ಲಿ ಊರಿನ ಜನತೆ ಹಾಗೂ ಹಳೇ ವಿದ್ಯಾರ್ಥಿ ಗಳು ಟೊಂಕ ಕಟ್ಟಿದ್ದರು.

ಅದರಂತೆ ಯೋಜನೆ ರೂಪಿಸಿ‌ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಶಾಲೆಯನ್ನು ನೀಡುವ ಬಗ್ಗೆ ಚಿಂತನೆ ನಡೆಸಿದ್ದರು. ಆ ಬಳಿಕ ‌ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ‌ ಪ್ರಭಾಕರ ಭಟ್ ಅವರ ಜತೆ ಮಾತುಕತೆ ನಡೆಸಿ ವಿನಂತಿಸಿದ್ದಾರೆ. ಸಂಘ ಒಪ್ಪಿಗೆ ಸೂಚಿಸಿದೆ. ಶಾಲೆಯನ್ನು ಪಡೆದ ವಿದ್ಯಾವರ್ಧಕ ಸಂಘ 22 ಮಂದಿಯುಳ್ಳ ಶಾಲಾ ಆಡಳಿತ ಸಮಿತಿಯನ್ನೂ ರಚಿಸಿ ಶಾಲೆಯ ಏಳಿಗೆಗೆ ಮುಂದಾಗಿದೆ.

ಮಕ್ಕಳ ಸಂಖ್ಯೆ ಧಿಡೀರ್ ಏರಿಕೆ

ವಿವೇಕಾನಂದ ವಿದ್ಯಾವರ್ಧಕ ಸಂಘ ಶಾಲೆಯನ್ನು ಪಡೆಯುತ್ತಲೇ ಶಾಲೆಯ‌ ಬದಲಾವಣೆಯ ಮುನ್ನುಡಿ ಪ್ರಾರಂಭವಾಗಿದೆ. 1ರಿಂದ 7ನೇ ತರಗತಿ ಇದ್ದ ಶಾಲೆಯಲ್ಲಿ ಈ ಬಾರಿ ಶಿಶು ಮಂದಿರವನ್ನೂ ಪ್ರಾರಂಭಿಸಲಾಗಿದೆ. ಶಿಶುಮಂದಿರಕ್ಕೆ ಬರೊಬ್ಬರಿ 91 ಮಕ್ಕಳು‌ ಸೇರ್ಪಡೆಯಾಗಿದ್ದಾರೆ. 1ನೇ ತರಗತಿಗೆ 62 ಮಕ್ಕಳು‌ ದಾಖಲಾಗಿದ್ದಾರೆ. ಆಂಗ್ಲ ಮಾಧ್ಯಮ ಶಾಲೆಯಿಂದಲೂ ಒಟ್ಟು 50 ಮಂದಿ ವಿದ್ಯಾರ್ಥಿಗಳು ಈ ಶಾಲೆಗೆ ದಾಖಲಾಗಿರುವುದು ವಿಶೇಷ. ಹೀಗೆ ಮೊದಲ ವರ್ಷದಲ್ಲೇ 347ಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದ್ದು, ಶಾಲಾ ಕಟ್ಟಡದ ಕೊರತೆಯಿಂದ ಹಲವು‌ ಮಕ್ಕಳನ್ನು ಕೈಬಿಡಲಾಗಿದೆ. ಮುಂದಿನ ವರ್ಷ ನೂತನ ‌ಕಟ್ಟಡ ನಿರ್ಮಾಣಗೊಂಡರೆ, ಜತೆಗೆ ಹೈಸ್ಕೂಲ್ ಪ್ರಾರಂಭವಾದರೆ ಮಕ್ಕಳ‌ ಸಂಖ್ಯೆ 500 ದಾಟುವುದರಲ್ಲಿ ಅನುಮಾನವಿಲ್ಲ.‌ ನೂತನ ಕಟ್ಟಡ ನಿರ್ಮಾಣ, ಹೈಸ್ಕೂಲ್ ಪ್ರಾರಂಭಿಸುವ ಯೋಚನೆ ಇದೆ‌ ಎನ್ನುತ್ತಾರೆ ಸಮಿತಿಯ‌‌‌ ಪ್ರಮುಖರು.

ನಾರಾವಿ, ಸುಲ್ಕೇರಿ, ಕೊಕ್ರಾಡಿ, ಅಳದಂಗಡಿ, ಶಿರ್ಲಾಲು, ಸಾವ್ಯ ಮೊದಲಾದ ಭಾಗಗಳಿಂದ‌ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ದೂರದ‌ ವಿದ್ಯಾರ್ಥಿಗಳ ಪ್ರಯಾಣಕ್ಕೆ ವಾಹನ ಸೌಲಭ್ಯ‌ ಕಲ್ಪಿಸಲಾಗಿದೆ. ಜತೆಗೆ ವಿದ್ಯಾರ್ಥಿಗಳಿಗೆ ಈ ವರ್ಷ ವಾಹನ‌ ಭತ್ಯೆ ಹೊರತುಪಡಿಸಿ ಬೇರೆಲ್ಲಾ ಉಚಿತವಾಗಿಯೇ ನೀಡಲಾಗುತ್ತಿದೆ. ಅನುದಾನಿತ ಶಾಲೆಯಾದ್ದರಿಂದ ಒಬ್ಬರು ಸರಕಾರಿ ನಿಯೋಜಿತ  ಶಿಕ್ಷಕರಿದ್ದಾರೆ. ಹೊಸದಾಗಿ 8 ಶಿಕ್ಷಕರನ್ನು ಹಾಗೂ‌ ಶಿಶು ಮಂದಿರಕ್ಕೆ ಇಬ್ಬರನ್ನು ನೇಮಕ‌ ಮಾಡಲಾಗಿದೆ.

ಸಂಸ್ಕಾರಯುತ ಶಿಕ್ಷಣ

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶಿಕ್ಷಣದ ಜತೆಗೆ ಭರತನಾಟ್ಯ, ಸಂಗೀತ, ಯಕ್ಷಗಾನ‌,‌ ಯೋಗಾಭ್ಯಾಸ‌, ಸಾಂಸ್ಕೃತಿಕ ಹಾಗೂ‌ ಕೃಷಿ‌ ಚಟುವಟಿಕೆ, ನಿವೃತ್ತ ಶಿಕ್ಷಕರಿಂದ ತರಗತಿ ಹೀಗೆ ಗುರುಕುಲ ಮಾದರಿಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಹೀಗಾಗಿ ಇಂಗ್ಲಿಷ್‌ ಮಾಧ್ಯಮವೇ ಮೆರೆಯುತ್ತಿರುವ ಈ‌ ಕಾಲದಲ್ಲಿ ಇಂಥ‌ ಕನ್ನಡ  ಮಾಧ್ಯಮ ಶಾಲೆಗಳನ್ನು ಅಲ್ಲಲ್ಲಿ‌ ಉನ್ನತಿಗೊಳಿಸಿದರೆ ಅದೇ ಕನ್ನಡ ಭಾಷೆಗೆ, ಅದರ ಉಳಿವಿಗೆ ನೀಡುವ ಶ್ರೇಷ್ಠ ಗೌರವ ಎನ್ನಬಹುದು.

ಆತ್ಮಬಲ ವೃದ್ದಿಸುವ ಶಾಲೆ; ಸಹಕಾರ ಅಗತ್ಯ

“ಮಾತೃ ಭಾಷೆ ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ದೊರೆತರೆ ಅವರ ಪ್ರತಿಭೆ ನಿಜವಾಗಿ ಅರಳುತ್ತದೆ. ಜತೆಗೆ ಇವತ್ತಿನ ಅವಶ್ಯಕತೆಗೆ ಪೂರಕವಾಗಿ ಇಂಗ್ಲೀಷ್ ಭಾಷೆಯನ್ನೂ ಒಂದನೇ ತರಗತಿಯಿಂದಲೇ ಕಲಿಸಲಾಗುತ್ತಿದೆ. ಇಂದಿನ ಶಾಲೆಗಳಲ್ಲಿ ಅಕ್ಷರಾಭ್ಯಾಸ ಮಾತ್ರ ನಡೆಯುತ್ತಿದೆ. ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣದ ಕೊರತೆ ಇದೆ. ನಮ್ಮ ಸಮಾಜದ ಒಳ್ಳೆಯ ತನವನ್ನು ಮಕ್ಕಳಿಗೆ ತಿಳಿಸಬೇಕು. ಇದೊಂದು ಆತ್ಮಬಲ ಬೆಳೆಸುವ ಶಾಲೆಯಾಗಲಿದೆ. ಶಿಕ್ಷಣ ಪಡೆದ ಮಕ್ಕಳು ಸಮಾಜದ ಆಸ್ತಿಯಾಗಬೇಕು. ಕನ್ನಡ ಮಾಧ್ಯಮ ಶಾಲೆ ಉಳಿಯಬಬೇಕು. ಹೀಗಾಗಿ‌ ಇಲ್ಲಿ ಊರಿನ ಜನರ ಎಲ್ಲಾ ರೀತಿಯ ಸಹಕಾರವೂ ಬೇಕು.

-ಗಣೇಶ ಹೆಗ್ಡೆ, ಗೌರವಾಧ್ಯಕ್ಷರು, ಶಾಲಾ ಆಡಳಿತ ಸಮಿತಿ