ಬೆಳ್ತಂಗಡಿ: ಜಲಪ್ರಳಯಕ್ಕೆ ಕೊಚ್ಚಿಹೋದ ಭೂಮಿಯಲ್ಲೀಗ ಸಮೃದ್ಧ ಕೃಷಿ

ಮಂಗಳೂರು: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಪರ್ವತಶ್ರೇಣಿಗಳ ತಪ್ಪಲಿನಲ್ಲಿ ಅಂದು ಜಲಪ್ರಳಯಕ್ಕೆ ಕೊಚ್ಚಿಹೋಗಿದ್ದ ಹತ್ತಾರು ಗ್ರಾಮಗಳು ಮತ್ತೆ ಸುಂದರವಾಗಿ ಎದ್ದು ನಿಂತಿವೆ.
ದಾನಿಗಳ ಸಹಾಯದಿಂದ ಜನರು ಮತ್ತೆ ಬದುಕು ಕಟ್ಟಿಕೊಟ್ಟಿದ್ದಾರೆ. ಮೃತ್ಯುಂಜಯ ಹೊಳೆಯಿಂದ ಕೃಷಿ ಭೂಮಿಗೆ ಬಿದ್ದ 4 ಅಡಿ ಮರಗಳನ್ನು ಹೊರ ತೆಗೆದು ಸುಮಾರು 70 ಎಕರೆ ಭೂ ಪ್ರದೇಶದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಉಜಿರೆಯ ಉದ್ಯಮಿಗಳಾದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ಇವರು ಸ್ವಾತಂತ್ರ್ಯೋತ್ಸವದಂದು ಸುಮಾರು 500ಕ್ಕೂ ಹೆಚ್ಚು ಯುವಕರ ತಂಡ ಕಟ್ಟಿಕೊಂಡು ಅ.15ರಂದು ಪುನರ್‌ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಕೊಳಂಬೆ ಮತ್ತು ಅಂತರ ಗ್ರಾಮವನ್ನು ದತ್ತು ಪಡೆದುಕೊಂಡು ಎರಡು ತಿಂಗಳ ಪ್ರತಿ ರವಿವಾರ ಎರಡೂವರೆ ಸಾವಿರ ಕೂಲಿಯಾಳುಗಳು ಮತ್ತು ಎರಡೂವರೆ ಸಾವಿರ ಮಂದಿ ಸ್ವಯಂ ಸೇವಕರ ಶ್ರಮದಿಂದ ಎರಡು ಗ್ರಾಮಗಳಿಗೆ ಪುನರುಜ್ಜೀವನ ನೀಡಿದ್ದಾರೆ.
ಗದ್ದೆಗಳಲ್ಲಿ ರಾಶಿಬಿದ್ದ ಮರಮುಟ್ಟುಗಳನ್ನು, ಹೂಳನ್ನು ಹೊರತೆಗೆದು ಭತ್ತದ ನೇಜಿಯನ್ನು ನಾಟಿ ಮಾಡಿದ್ದಾರೆ.
ನೂರು ಬಾಳೆ ಗಿಡಗಳು,‌ 50 ಬುಡ ಬಸಳೆ, 20 ಸಾಲು ಅಲಸಂಡೆ, 12 ಸಾಲು ಸೌತೆ, 20 ಬುಡ ತೊಂಡೆ, ‌50 ಬದನೆ ಗಿಡಗಳ ನಾಟಿ ಮಾಡಲಾಗಿದೆ.