ಬೆಳ್ತಂಗಡಿ: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಮಹಾ ಸಂಪರ್ಕ ಅಭಿಯಾನದಡಿ ಬೆಳ್ತಂಗಡಿ ಮಂಡಲದಲ್ಲಿ ಬಿಜೆಪಿ ಅಭ್ಯರ್ಥಿ, ಶಾಸಕ ಹರೀಶ್ ಪೂಂಜ ಅವರ ಪರ 20 ಸಾವಿರ ಕಾರ್ಯಕರ್ತರು 50 ಸಾವಿರ ಮನೆಗಳನ್ನು ಸಂಪರ್ಕಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಬೆಳ್ತಂಗಡಿ ಮಂಡಲದ 81 ಗ್ರಾಮಗಳ 241 ಬೂತ್ಗಳಲ್ಲಿ ಮಹಾಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದು ಮತದಾರರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಒಂದೇ ದಿನ 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಉತ್ಸುಕತೆಯಿಂದ ಪಾಲ್ಗೊಂಡು 50 ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರ ಪರವಾಗಿ ಮತ ಯಾಚನೆ ನಡೆಸಿದರು.
ಪ್ರತಿ ಬೂತ್ ಮಟ್ಟದಲ್ಲಿ ಜನಸಂಪರ್ಕ ನಡೆಸಿ ಬಿಜೆಪಿಯೇ ಭರವಸೆ ಎಂಬುದನ್ನು ಜನರಿಗೆ ಮನದಟ್ಟು ಮಾಡುವ ಜತೆಗೆ, ಕಾಂಗ್ರೆಸ್ನ ಗ್ಯಾರೆಂಟಿ ಕಾರ್ಡುಗಳಿಗೆ ಮರುಳಾಗದಂತೆ ಹಾಗೂ ಪ್ರಬುದ್ಧ ನಾಗರಿಕ ಮತದಾರರಾಗಿ ಈ ದೇಶದ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿಗೆ ಮತದಾನ ಮಾಡುವಂತೆ ಮನವಿ ಮಾಡಿದರು.
ಮಹಾ ಸಂಪರ್ಕ ಅಭಿಯಾನದಲ್ಲಿ ಶಾಸಕ ಹರೀಶ್ ಪೂಂಜ, ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪಕ್ಷದ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗಿಯಾದರು.
ಹರೀಶ್ ಪೂಂಜರಿಂದ ವಿವಿಧ ಚರ್ಚ್ಗಳಿಗೆ ಭೇಟಿ
ಮಹಾ ಸಂಪರ್ಕದ ಭಾಗವಾಗಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ರವಿವಾರ ಬೆಳ್ತಂಗಡಿ ತಾಲೂಕಿನ ವಿವಿಧ ಚರ್ಚ್ಗಳಿಗೆ ಭೇಟಿ ನೀಡಿ ಕ್ರೈಸ್ತ ಬಂಧುಗಳಲ್ಲಿ ಮತಯಾಚಿಸಿದರು.
ಸೇಕ್ರೆಡ್ ಸೆಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು, ಸಂತ ರಫಾಯೆಲ್ ಚರ್ಚ್ ಬದ್ಯಾರು, ಸಂತ ಸೆಬಾಸ್ಟಿನ್ ಚರ್ಚ್ ಗರ್ಡಾಡಿ, ಸಂತ ಪೀಟರ್ ಕ್ಲೆವರ್ ಚರ್ಚ್ ಅಳದಂಗಡಿ, ಕ್ರಿಸ್ತರಾಜ ಚರ್ಚ್ ವೇಣೂರು ಇಲ್ಲಿಗೆ ಭೇಟಿ ನೀಡಿ ಕ್ರೈಸ್ತ ಬಂಧುಗಳ ಬಳಿ ಮತಯಾಚಿಸಿದರು. ಈ ವೇಳೆ ಚರ್ಚ್ನ ಧರ್ಮಗುರುಗಳು ಶಾಸಕರನ್ನು ಅಶೀರ್ವದಿಸಿದರು. ತಾಲೂಕಿಗೆ ನಿಮ್ಮಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಜೋಯೆಲ್ ಮೆಂಡೋನ್ಸಾ, ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಬೇಬಿ ಸುಜನ್ಹಾ, ಲಾೖಲ ಗ್ರಾ.ಪಂ. ಅಧ್ಯಕ್ಷ ಆಶಾ ಸಾಲ್ಡಾನ, ಪಡಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಆಂಟೋನಿ ಗರ್ಡಾಡಿ, ಪಡಂಗಡಿ ಗ್ರಾ.ಪಂ. ಉಪಾಧ್ಯಕ್ಷ ಕವಿತಾ ಮೊನಿಸಾ, ತಾಲೂಕು ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಅರುಣ ಕ್ರಾಸ್ತಾ, ವೇಣೂರು ಗ್ರಾ.ಪಂ. ಸದಸ್ಯ ಅನೂಪ್ ಪಾಯಸ್, ಮಾಲಾಡಿ ಗ್ರಾ.ಪಂ. ಸದಸ್ಯ ಸೆಲೆಸ್ಟಿನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಭಾರತೀಯ ಜನತಾ ಪಾರ್ಟಿ, ಬೆಳ್ತಂಗಡಿ ಮಂಡಲ ವತಿಯಿಂದ ನಡೆದ ಮಹಾ ಸಂಪರ್ಕ ಅಭಿಯಾನ ಯಶಸ್ವಿಯಾಗಿ ಸಂಪನ್ನಗೊಂಡಿದೆ. 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು 50 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದ್ದು ಮಹಾ ಸಂಪರ್ಕ ಅಭಿಯಾನದ ಯಶಸ್ಸಿಗೆ ಕಾರಣಿಭೂತರಾದ ನನ್ನೆಲ್ಲಾ ಕಾರ್ಯಕರ್ತ ಬಂಧುಗಳಿಗೆ ಅಭಿವಂದನೆಗಳು.
*ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ ವಿ.ಸ.ಕ್ಷೇತ್ರ ಬಿಜೆಪಿ ಅಭ್ಯರ್ಥಿ