ಮತಾಂತರದ‌ ಮೂಲಕ‌ ಹಿಂದೂ ಧರ್ಮಕ್ಕೆ ಮೋಸ ಮಾಡಬೇಡಿ: ಬೆಳ್ಮಣ್ ಚಲೋ ಸಭೆಯಲ್ಲಿ ಡಾ.‌ ಪ್ರಭಾಕರ ಭಟ್ 

ಕಾರ್ಕಳ: ಹಿಂದೂ ಸಮಾಜಕ್ಕೆ ಮತಾಂತರದ ಮೂಲಕ ಮೋಸ ಮಾಡುವ ಕೆಲಸ ಯಾರೂ ಮಾಡಬೇಡಿ. ಹಿಂದೂ ಧರ್ಮ ಇಡೀ ಜಗತ್ತಲ್ಲಿ ಸರ್ವ ಶ್ರೇಷ್ಠವಾದ ಧರ್ಮವಾಗಿದೆ. ಹೀಗಾಗಿ‌ ಬಂದರೂ ಈ ಹಿಂದೂ ದೇಶವನ್ನು ಮತಾಂತರ ಮಾಡಲು ಸಾಧ್ಯವಿಲ್ಲ. ಪದೇ ಪದೇ ಧರ್ಮವನ್ನು ಕೆಣಕುವ ಪ್ರಯತ್ನಕ್ಕೆ ಕೈ ಹಾಕಬೇಡಿ. ಕೆಣಕಿದರೆ ಹಿಂದೂಗಳು ಸುಮ್ಮನಿರುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ವಿಶ್ವ ಹಿಂದೂ ಪರಿಷದ್ ಭಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ಭಾನುವಾರ ಬೆಳ್ಮಣ್‌ನಲ್ಲಿ ನಡೆದ ಮತಾಂತರದ ವಿರುದ್ದ ಬೆಳ್ಮಣ್ ಚಲೋ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಜಗತ್ತಿನ ಸರ್ವ ಶ್ರೇಷ್ಠವಾದ ಧರ್ಮ ಹಿಂದೂ ಧರ್ಮ. ಹೀಗಾಗಿ ಭಾರತದ ಮಣ್ಣಿನ ಮೇಲೆ ನಿಷ್ಠೆ, ನಂಬಿಕೆ ಇರಬೇಕು.‌ ಇಲ್ಲಿರುವ ಪ್ರತಿಯೊಬ್ಬರೂ ದೇಶವನ್ನು ,ಇಲ್ಲಿನ ಸಂಸ್ಕೃತಿಯನ್ನು ಪ್ರೀತಿಸಬೇಕು. ಹೊರತು ಮತಾಂತದಂಥ ಧರ್ಮ ಒಡೆಯುವ ಕೃತ್ಯ ಮಾಡಬೇಡಿ. ಹಿಂದೂ ಧರ್ಮ ಇತರ ಧರ್ಮವನ್ನು ಆಕ್ರಮಣ ಮಾಡಿದ ಇತಿಹಾಸವಿಲ್ಲ. ಆದರೆ ಹಿಂದೂಗಳೀಗೆ ನಿರಂತರ ದೌಜನ್ಯಗಳನ್ನು ನೀಡಿ ಮತಾಂತರ ಮಾಡುವ ಕೆಲಸ ನಡೆಯುತ್ತಿದೆ. ಹೀಗಾಗಿ ಮುಂದೆ ಇಂಥ‌ ಕೆಲಸ ನಡೆದರೆ ನಾವು ತಕ್ಕ ಪಾಠ ಕಲಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ ಅವರು, ಮೋಸದಿಂದ ಹಿಂದೂಗಳನ್ನು ಮತಾಂತರ ಮಾಡುವ ಕೆಲಸಗಳು ಕೊನೆಗೊಳ್ಳಬೇಕು ಎಂದರು.
ಸಭೆಯಲ್ಲಿ ಮತಾಂತರಿಗಳ ವಿರುದ್ದ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಸಹಾಯಕ ಎಸ್ಪಿ ಕುಮಾರ್ ಚಂದ್ರ ಹಾಗೂ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಾಸಿರ್ ಹುಸೇನ್ ಅವರಿಗೆ ಹಿಂದೂ ಮುಖಂಡರು ಮನವಿ ಸಲ್ಲಿಸಿದರು.
ಕನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಜಿಲ್ಲಾ ಗೋ ರಕ್ಷ ಪ್ರಮುಖ್ ದಿನೇಶ್ ಶೆಟ್ಟಿ ಹೆಬ್ರಿ, ವಿಹಿಂಪ ಜಿಲ್ಲಾ ಗೋ ರಕ್ಷ ಪ್ರಮುಖ್ ಉಮೇಶ್ ನಾಯಕ್ ಸೂಡ, ಮಹೇಶ್ ಬೈಲೂರು, ಭಜರಂಗದಳ ತಾಲೂಕು ಸಂಚಾಲಕ ಗುರುಪ್ರಸಾದ್ ನಾರಾವಿ, ಬೆಳ್ಮಣ್ ವಲಯ ವಿಹಿಂಪ ಅಧ್ಯಕ್ಷ ಪ್ರಸಾದ್ ಶೆಟ್ಟಿ ಕಾಡಿ ಕಂಬಳ, ಹಿಂದೂ ಮುಖಂಡ ರತ್ನಕರ್ ಅಮೀನ್ ಹಾಗೂ ಮತ್ತಿತರ ಪ್ರಮುಖರು‌ ಉಪಸ್ಥಿತರಿದ್ದರು.