ಬೆಳಕು ಮೀನುಗಾರಿಕೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ಉಡುಪಿ: ಜಿಲ್ಲೆಯ ಪರ್ಸಿನ್‌ ಮೀನುಗಾರರು ಸರ್ಕಾರಿ ಆದೇಶವನ್ನು ಉಲ್ಲಂಘಿಸಿ, ಅಕ್ರಮ ಬೆಳಕು ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ಮತ್ಸ್ಯ ಸಂಕುಲ ಅವನತಿಯ ಅಂಚಿಗೆ ತಲುಪಿದೆ. ಹಾಗಾಗಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಡೀಪ್‌ ಸೀ ಟ್ರಾಲ್‌ ಬೋಟ್‌ ಅಸೋಸಿಯೇಶನ್‌ ಅಧ್ಯಕ್ಷ ಕಿಶೋರ್‌ ಡಿ. ಸುವರ್ಣ ಆಗ್ರಹಿಸಿದರು.

ಅಕ್ರಮ ಬೆಳಕು ಮೀನುಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡೀಪ್‌ ಸೀ ಟ್ರಾಲ್‌ ಬೋಟ್‌ ಅಸೋಸಿಯೇಶನ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದರು. ಬೆಳಕು ಮೀನುಗಾರಿಕೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಹೈ ಕೋರ್ಟ್‌ ನಿರ್ಬಂಧ ಹೇರಿದೆ. ಆದರೆ ಈ ಬಗ್ಗೆ ಮೀನುಗಾರಿಕೆ ಇಲಾಖೆಯಾಗಲಿ, ಕರಾವಳಿ ಕಾವಲು ಪಡೆಯಾಗಲಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಕು ಮೀನುಗಾರಿಕೆಯನ್ನು ವಿರೋಧಿಸಿ ಫೆ. 27ರಿಂದ ಆಳ ಸಮುದ್ರ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದೇವೆ. ಇದರಿಂದ 8 ಸಾವಿರದಷ್ಟು ಮೀನುಗಾರರು ಹಾಗೂ ಇದನ್ನು ಅವಲಂಬಿಸಿರುವ ಸಾವಿರಾರು ಮಂದಿ ಕಾರ್ಮಿಕರು ಕೆಲಸ ವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಅಕ್ರಮ ಬೆಳಕು ಮೀನುಗಾರಿಕೆ ವಿರುದ್ಧ ಶಾಶ್ವತ
ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಕ್ರಮ ಬೆಳಕು ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಪರ್ಸಿನ್‌ ಬೋಟ್‌ಗಳ ವಿರುದ್ಧ ಸಮುದ್ರಕ್ಕೆ ತೆರಳಿಯೇ ಕ್ರಮಕೈಗೊಳ್ಳಬೇಕೆಂದಿಲ್ಲ. ಬಂದರಿನಲ್ಲಿಯೇ ಬೋಟ್‌ಗಳು ಲಂಗಾರು ಹಾಕಿರುತ್ತೇವೆ. ಆ ವೇಳೆ ಕ್ರಮ ಜರುಗಿಸಬಹುದು. ಆದರೆ ಇಲಾಖೆಯ ಅಧಿಕಾರಿಗಳು ಇಚ್ಛಾಶಕ್ತಿಯನ್ನು ತೋರುತ್ತಿಲ್ಲ ಎಂದು ದೂರಿದ ಅವರು, ನಿಯಮಗಳನ್ನು ಉಲ್ಲಂಘಿಸುವವರಿಗೆ ಒಂದು ಕಾನೂನು, ನಿಯಮದ ಪ್ರಕಾರ ನಡೆದುಕೊಳ್ಳುವವರಿಗೆ ಒಂದು ಕಾನೂನು ಸರಿಯಲ್ಲ. ಪರವಾನಗಿ ಇಲ್ಲದೆ ಮೀನುಗಾರಿಕೆ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಸರ್ಕಾರ ಹಾಗೂ ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಮೀನುಗಾರಿಕೆ ನಡೆಸಿದ ಬೋಟುಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಮೀನುಗಾರಿಕಾ ಇಲಾಖೆಗೆ ಸೂಚನೆ ನೀಡಲಾಗಿದೆ. ನಾಲ್ಕು ದಿನಗಳ ಹಿಂದೆಯಷ್ಟೆ ಇದರ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮೀನುಗಾರ ಮುಖಂಡರಾದ ರವಿರಾಜ್‌ ಸುವರ್ಣ, ಮಿಥುನ್‌ ಕರ್ಕೇರ, ಭುವನೇಶ್‌ ಕೋಟ್ಯಾನ್‌, ಹರೀಶ್‌ ಕೋಟ್ಯಾನ್‌, ಶಂಕರ ಸಾಲಿಯಾನ್‌, ವಿಠಲ ಕರ್ಕೇರ, ದಯಾನಂದ ಕುಂದರ್‌, ರಾಮ ಅಮಿನ್‌, ಆನಂದ ಅಮಿನ್‌ ನಿಯೋಗದಲ್ಲಿ ಇದ್ದರು.