ಮಧ್ಯಾಹ್ನದ ಬಿಸಿಯೂಟ ಆರಂಭಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು‌ ಮತ್ತೆ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಏಪ್ರಿಲ್ 15ರಿಂದ ಮಧ್ಯಾಹ್ನದ ಬಿಸಿಯೂಟ ಆರಂಭಿಸಿ ಎಂದು ಹೇಳಿದೆ.

ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಬಿಸಿಯೂಟ ಆರಂಭಿಸುತ್ತಿಲ್ಲ ಎಂಬ ಸರ್ಕಾರ ಉತ್ತರವನ್ನು ಪರಿಶೀಲಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ಹೊರಡಿಸಿತು.

ಶಾಲೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಬಿಸಿಯೂಟ ನೀಡಬೇಕು ಎಂದು ನಿರ್ದೇಶನ ನೀಡಲು ಕೋರಿ ಎಂ. ರಾಧಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು.

ಏಪ್ರಿಲ್ 10 ರಿಂದ ಜೂನ್ 10ರ ವರೆಗಿನ 47 ದಿನಗಳ ಕಾಲದ ಆಹಾರ ಭತ್ಯೆ ನೀಡಲು ಆರ್ಥಿಕ ನೆರವು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಶಾಲೆಗಳನ್ನು ತೆರೆದಿರುವ ಸಂದರ್ಭದಲ್ಲಿ ಊಟದ ಭತ್ಯೆ ನೀಡಲು ಆಗುವುದಿಲ್ಲ. ಏಪ್ರಿಲ್ 15ರಿಂದ ಬಿಸಿಯೂಟ ಆರಂಭಿಸುವ ನಿರ್ಧಾರ ಕೈಗೊಂಡು ಏ. 8ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಪೀಠ ತಿಳಿಸಿದೆ.