ಶುರುವಾಗಿದೆ ಇ-ಸಂಜೀವಿನಿ: ಮನೆಯಿಂದಲೇ ಪಡೀರಿ ಅಗತ್ಯ ಆರೋಗ್ಯ ಸೇವೆ

ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ತುರ್ತು ಆರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಕೇಂದ್ರಗಳಿಗೆ/ಆಸ್ಪತ್ರೆಗಳಿಗೆ ಭೇಟಿ ನೀಡುವುದು ಕಷ್ಟ ಸಾದ್ಯವಾಗಿರುತ್ತದೆ. ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಇ-ಸಂಜೀವಿನಿ ಟೆಲಿ ಮೆಡಿಸಿನ್ ರಾಷ್ಟ್ರ ಮಟ್ಟದಲ್ಲಿ ಆರಂಭಗೊಂಡಿದೆ.

ಇ-ಸಂಜೀವಿನಿ-ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ (ನ್ಯಾಷನಲ್‌ಟೆಲಿ ಕನ್ಸಲ್‌ಟೇಷನ್ ಸರ್ವೀಸ್) ಎಂಬ ಹೆಸರಿನಲ್ಲಿ ಮೊಬೈಲ್ ಆಪ್ ಅನ್ನು ಸಿದ್ಧಪಡಿಸಲಾಗಿದ್ದು, ಸಾರ್ವಜನಿಕರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಮನೆಯಿಂದಲೇ ವೈದ್ಯರನ್ನು ಮೊಬೈಲ್ ಮುಖಾಂತರ ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದೆ.

ಕಾರ್ಯಾಚರಣೆ ಹೇಗೆ?

ಟೆಲಿ ಸಮಾಲೋಚನಾ ಆರೋಗ್ಯ ಸೇವೆ ಪಡೆಯಲು ಇ-ಸಂಜೀವಿನಿ ಮೊಬೈಲ್ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ಅಥವಾ ಕಂಪ್ಯೂಟರ್‌ನ ಗೂಗಲ್‌ನಲ್ಲಿ ಇ-ಸಂಜೀವಿನಿ ಓ.ಪಿ.ಡಿ ಎಂದು ನಮೂದಿಸಬೇಕು. ಪರದೆಯ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯದ ಮುಖ ಪುಟ ತೆರೆದುಕೊಳ್ಳುವುದು. ಇದರಲ್ಲಿ ರೋಗಿಯ ದಾಖಲಾತಿ ಕಾಲಂನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿದರೆ ನಿಮಗೆ ಓ.ಟಿ.ಪಿ ಸಂಖ್ಯೆ ಲಭ್ಯವಾಗುವುದು. ಇದರ ಮುಖಾಂತರ ದಾಖಲಾತಿ ಅರ್ಜಿ ತೆರೆದುಕೊಳ್ಳುವುದು. ಇದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನಮೂದಿಸಿಬೇಕು.

ಆಗ ಟೋಕನ್ ನಂಬರ್ ಲಭ್ಯವಾಗುವುದು. ಈ ನಂಬರ್ ನೀಡಿ ತಜ್ಞ ವೈದ್ಯರನ್ನು ವಿಡಿಯೋಕಾಲ್ ಮೂಲಕ ಸಂಪರ್ಕಿಸಬಹುದಾಗಿದೆ. ಈ ಸೇವೆಯು ಸೋಮವಾರದಿಂದ ಶನಿವಾರದವರೆಗೆ, ಬೆಳಗ್ಗೆ 10 ರಿಂದ ಸಂಜೆ 4.30 ಗಂಟೆವರೆಗೆ ಲಭ್ಯವಿರುತ್ತದೆ. ವಿಡಿಯೋಕಾಲ್ ಮುಖಾಂತರ ವೈದ್ಯರು ರೋಗಿಯ ಆರೋಗ್ಯ ಸಮಸ್ಯೆಗಳನ್ನು ಆಲಿಸಿ ಚಿಕಿತ್ಸೆಯನ್ನು ಸೂಚಿಸುವರು.